ADVERTISEMENT

ದಲಿತರ ಕ್ಷಮೆ ಕೋರಿದ ತಹಶೀಲ್ದಾರ್

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2011, 19:30 IST
Last Updated 22 ಅಕ್ಟೋಬರ್ 2011, 19:30 IST

ನಾಗಮಂಗಲ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಕುಂದುಕೊರತೆ ನಿವಾರಿಸುವ ಮಾಸಿಕ ಸಭೆಯಲ್ಲಿ ದಲಿತರನ್ನು ~ಹರಿಜನ~ ಎಂದು ಕರೆದ  ತಹಶೀಲ್ದಾರ್ ವಿರುದ್ಧ ಆಕ್ರೋಶಗೊಂಡ ಮುಖಂಡರು ಕ್ಷಮೆಯಾಚಿಸುವಂತೆ ಶನಿವಾರ ಆಗ್ರಹಿಸಿದರು.

ಪಟ್ಟಣದ ಮಿನಿ ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ದಲಿತರನ್ನು ~ಹರಿಜನ~ ಎಂದು ಕರೆದಿದ್ದರಿಂದ ಮುಖಂಡರು ಆಕ್ರೋಶಗೊಂಡರು. ಬಳಿಕ ತಹಶೀಲ್ದಾರ್ ಚಂದ್ರ ಕ್ಷಮೆ ಕೇಳಿದ ಬಳಿಕ ಸಭೆ ಮುಂದುವರೆಯಿತು.

ಪಟ್ಟಣದ ಮಂಡ್ಯ-ಮೈಸೂರು ವೃತ್ತಕ್ಕೆ 5 ವರ್ಷಗಳಿಂದ ಡಾ.ಅಂಬೇಡ್ಕರ್ ಹೆಸರು ಇಡುವಂತೆ ಪಟ್ಟಣ ಪಂಚಾಯಿತಿಗೆ ಮನವಿ ಸಲ್ಲಿಸಿದ್ದರೂ ಪಂಚಾಯಿತಿ ಸಬೂಬು ಹೇಳುತ್ತಲೇ ಬಂದಿದೆ.
 
ತಾಲ್ಲೂಕಿನಲ್ಲಿ ದಲಿತರಿಗೆ ಪ್ರತ್ಯೇಕ ಸ್ಮಶಾನ ಮಂಜೂರಾಗಿ ಆರ್.ಟಿ.ಸಿ ಇದ್ದರೂ ಭೂಮಿ ಅಳತೆ ಮಾಡಿ ಕೊಟ್ಟಿಲ್ಲ. ಇತ್ತೀಚೆಗೆ ಹೊಣಕೆರೆ ಹೋಬಳಿಯ ಸೋಮನಾಳಮ್ಮ ದೇವಾಲಯದಲ್ಲಿ ದಲಿತ ಹುಡುಗನೊಬ್ಬನಿಗೆ ಪೂಜೆ ನಿರಾಕರಿಸಲಾಗಿದೆ. ಲಾಳನಕೆರೆ ಪಂಚಾಯಿತಿಯಲ್ಲಿ ದಲಿತರ ಕೇರಿಗಳಿಗೆ ಬೀದಿ ದೀಪದ ವ್ಯವಸ್ಥೆಯಿಲ್ಲ ಎಂಬುದನ್ನು ಮುಖಂಡರು ಶಾಸಕರ ಗಮನಕ್ಕೆ ತಂದರು.

ತಹಶೀಲ್ದಾರ್ ಚಂದ್ರ, ಮುಂದಿನ ದಿನಗಳಲ್ಲಿ ದಲಿತರಿಗೆ ಯಾವುದೇ ತೊಂದರೆಯಾಗದಂತೆ ಹಾಗೂ ಸವಲತ್ತು ಪೂರೈಸುವ ವ್ಯವಸ್ಥೆ ಕಲ್ಪಿಸುವುದಾಗಿ ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಶಾಸಕ ಸುರೇಶ್‌ಗೌಡ, ಅಧಿಕಾರಿಗಳು ಸಮಸ್ಯೆಗೆ ಸ್ಪಂದಿಸದಿದ್ದರೆ ಸಂಬಂಧಪಟ್ಟವರ ಗಮನಕ್ಕೆ ತರಬೇಕು ಎಂದರು.

ಸರ್ಕಲ್ ಇನ್ಸ್‌ಪೆಕ್ಟರ್ ಟಿ.ಡಿ.ರಾಜು, ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಪ್ಪ, ಬಿಇಒ ವೇದಮೂರ್ತಿ, ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಡಾ.ಕೆ.ಮಾಲತಿ ಭಾಗವಹಿಸಿದ್ದರು.   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.