ADVERTISEMENT

ದಾವಣಗೆರೆ ಬಂದ್ ಪೂರ್ಣ ಯಶಸ್ವಿ

​ಪ್ರಜಾವಾಣಿ ವಾರ್ತೆ
Published 2 ಜನವರಿ 2013, 19:59 IST
Last Updated 2 ಜನವರಿ 2013, 19:59 IST
ಭದ್ರಾ ಕಾಲುವೆ ನೀರನ್ನು ಜ. 20ರಿಂದ ಬಿಡುವಂತೆ ಒತ್ತಾಯಿಸಿ ಬುಧವಾರ ದಾವಣಗೆರೆ ನಗರ ಬಂದ್ ಸಮದರ್ಭದಲ್ಲಿ ರೈತರು ಜಯದೇವವೃತ್ತದಲ್ಲಿ ಸಭೆ ನಡೆಸಿದರು
ಭದ್ರಾ ಕಾಲುವೆ ನೀರನ್ನು ಜ. 20ರಿಂದ ಬಿಡುವಂತೆ ಒತ್ತಾಯಿಸಿ ಬುಧವಾರ ದಾವಣಗೆರೆ ನಗರ ಬಂದ್ ಸಮದರ್ಭದಲ್ಲಿ ರೈತರು ಜಯದೇವವೃತ್ತದಲ್ಲಿ ಸಭೆ ನಡೆಸಿದರು   

ದಾವಣಗೆರೆ:ಭದ್ರಾ ಕಾಲುವೆ ನೀರನ್ನು ಜ. 1ರ ಬದಲು 20ರಿಂದ ಹರಿಸಲು ಆಗ್ರಹಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ನೀಡಿದ ಬಂದ್ ಕರೆಗೆ ನಗರದಲ್ಲಿ ಬುಧವಾರ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ನಗರದ ಎಲ್ಲ ಚಟುವಟಿಕೆಗಳು ಸ್ಥಗಿತಗೊಂಡಿದ್ದವು.

ಬಸ್ ಮೇಲೆ ಕಲ್ಲು ತೂರಾಟ, ತಹಶೀಲ್ದಾರ್ ಕಚೇರಿಯಲ್ಲಿ ದಾಂದಲೆ, ಶಾಸಕ ಬಸವರಾಜ ನಾಯ್ಕ ಮನೆಗೆ ಮುತ್ತಿಗೆ, ಮಾಧ್ಯಮ ಪ್ರತಿನಿಧಿಗಳ ಮೇಲೆ ಹಲ್ಲೆ ಯತ್ನದಂತಹ ಘಟನೆಗಳೂ ನಡೆದವು.
ಬೆಳಿಗ್ಗೆಯಿಂದಲೇ ನಗರದ ಜಯದೇವ ವೃತ್ತದಲ್ಲಿ ಸೇರಿದ ಪ್ರತಿಭಟನಾಕಾರರು ಟ್ರ್ಯಾಕ್ಟರ್, ಬೈಕ್ ಹಾಗೂ ಇತರ ವಾಹನಗಳನ್ನು ರಸ್ತೆಗೆ ಅಡ್ಡಲಾಗಿ ನಿಲ್ಲಿಸಿ ಸಂಚಾರಕ್ಕೆ ಅಡ್ಡಿಪಡಿಸಿದರು. ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು.

ಮಾರುಕಟ್ಟೆ, ಬ್ಯಾಂಕ್, ಪೆಟ್ರೋಲ್ ಪಂಪ್, ಚಿತ್ರಮಂದಿರಗಳೂ ಮುಚ್ಚಿದ್ದವು. ನಗರದ ಹಳೆಯ, ಹೊಸ ಬಸ್ ನಿಲ್ದಾಣಗಳು ಬಿಕೋ ಎನ್ನುತ್ತಿದ್ದವು. ಆಟೊರಿಕ್ಷಾ ಸಂಚಾರಕ್ಕೂ ಅವಕಾಶ ಇರಲಿಲ್ಲ.
ಡಿಸಿಎಂ ಟೌನ್ ಸಮೀಪದ ರಸ್ತೆಯಲ್ಲಿ ಖಾಸಗಿ ಬಸ್ ಮೇಲೆ ಕಲ್ಲು ತೂರಾಟ ನಡೆದು ಬಸ್ಸಿನ ಗಾಜು ಒಡೆದುಹೋಗಿದೆ.

ಇಂದು ರಸ್ತೆತಡೆ: ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಸಮಿತಿ ಸೂಕ್ತ ನಿರ್ಧಾರ ಕೈಗೊಳ್ಳುವವರೆಗೆ ಹೋರಾಟ ಮುಂದುವರಿಸಲಾಗುವುದು. ಇಂದು (ಜ. 3)ರಂದು ತಾಲ್ಲೂಕು ಕೇಂದ್ರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ರಸ್ತೆತಡೆ ಚಳವಳಿ ಮಾಡಲಾಗುವುದು ಎಂದು ರೈತಮುಖಂಡ ಹುಚ್ಚವ್ವನಹಳ್ಳಿ ಮಂಜುನಾಥ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT