ADVERTISEMENT

ದಾವಣಗೆರೆ: ರೂ 26 ಲಕ್ಷ ಮೌಲ್ಯದ ಟೈಟಾನಿಯಂ ವಶ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2011, 19:30 IST
Last Updated 18 ಸೆಪ್ಟೆಂಬರ್ 2011, 19:30 IST

ದಾವಣಗೆರೆ: ಅಕ್ರಮವಾಗಿ `ಟೈಟಾನಿಯಂ~ ಲೋಹವನ್ನು ಮಾರಾಟ ಮಾಡುತ್ತಿದ್ದ ಐವರನ್ನು ಜಿಲ್ಲಾ ಪೊಲೀಸರು ಶನಿವಾರ ರಾತ್ರಿ ಬಂಧಿಸಿದ್ದಾರೆ.

ಬಾಗಲಕೋಟೆ ಜಿಲ್ಲೆ ಇಳಕಲ್‌ನ ಗೋವಿಂದಪ್ಪ, ರಾಜಾ ಸಾಬ್, ಇಸ್ಮಾಯಿಲ್ ಜಬಿ, ಅರ್ಜುನ್ ಸಿಂಗ್ ಮತ್ತು ಹರಿಹರದ ಇರ್ಫಾನ್ ಬಂಧಿತ ಆರೋಪಿಗಳು. ಇಲ್ಲಿನ ಪುಣೆ-ಬೆಂಗಳೂರು (ಪಿಬಿ) ರಸ್ತೆ ಪಕ್ಕದ ಪಂಚಲಿಂಗೇಶ್ವರ ದೇವಸ್ಥಾನದ ಬಳಿ ಅವರನ್ನು ಬಂಧಿಸಲಾಯಿತು.

ಬಂಧಿತರಿಂದ ಸುಮಾರು ರೂ 26.80 ಲಕ್ಷ ಮೌಲ್ಯದ 6ಕೆಜಿ 700ಗ್ರಾಂ `ಟೈಟಾನಿಯಂ~ ಲೋಹದ 5 ತುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಟೈಟಾನಿಯಂ ಲೋಹವನ್ನು ಹಡಗು, ವಿಮಾನಗಳ ಬಿಡಿಭಾಗ ತಯಾರಿಕೆ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಬಳಸಲಾಗುತ್ತದೆ. ಮಾರುಕಟ್ಟೆಯಲ್ಲಿ 1ಕೆಜಿ ಟೈಟಾನಿಯಂಗೆ ಸುಮಾರು ರೂ 4ಲಕ್ಷದವರೆಗೆ ಬೆಲೆ ಇದೆ ಎನ್ನಲಾಗಿದೆ. ವಶಪಡಿಸಿಕೊಂಡಿರುವ ಟೈಟಾನಿಯಂ ತುಂಡುಗಳನ್ನು ತಜ್ಞರಿಂದ ಪರೀಕ್ಷಿಸಿ ಅವುಗಳ  ನಿಜವಾದ ಮೌಲ್ಯದ ಕುರಿತು ಮಾಹಿತಿ ಪಡೆಯಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಎಸ್. ವೆಂಕಟೇಶ್, ಹೆಚ್ಚುವರಿ ಎಸ್ಪಿ ಬಿ.ಟಿ. ಚವಾಣ್, ನಗರ ಡಿವೈಎಸ್ಪಿ ಕೆ.ಪಿ. ಚಂದ್ರಪ್ಪ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಯಿತು. ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.