ADVERTISEMENT

ದುಬಲಗುಂಡಿ: ಚಿಣ್ಣರು ಸೇರಿ 10 ಮಂದಿಗೆ ವಾಂತಿಭೇದಿ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2012, 19:30 IST
Last Updated 7 ಅಕ್ಟೋಬರ್ 2012, 19:30 IST

ಹುಮನಾಬಾದ್: ತಾಲ್ಲೂಕಿನ ದುಬಲಗುಂಡಿ ಗ್ರಾಮದಲ್ಲಿ ವಾಂತಿಭೇದಿಯಿಂದ ಅಸ್ವಸ್ಥರಾಗಿದ್ದ ಇಬ್ಬರು ಚಿಣ್ಣರು ಸೇರಿದಂತೆ 10 ಮಂದಿಗೆ ಹುಮನಾಬಾದ್ ತಾಲ್ಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಭಾನುವಾರ ಚಿಕಿತ್ಸೆ ನೀಡಲಾಯಿತು.

ಶಕುಂತಲಾ ಮಾಣಿಕರಾವ ಬೋನಾಕುಡ್ತಿ, ಶರಣವ್ವ ಭೀಮಶಾ ಚೌಡಿ, ತುಕ್ಕಮ್ಮ ಜೆಟ್ಟೆಪ್ಪ ಖಜೂರೆ, ಸೃಷ್ಟಿ ಅನಿಲ್, ಕವಿತಾ ಸಂತೋಷ, ನಾಗಮ್ಮ ಸಂಗಪ್ಪ, ಗಣೇಶ ಉಮೇಶ, ಸರಸ್ವತಿ ಸಿದ್ರಾಮ ಸೇರಿ ಗ್ರಾಮದ ಒಟ್ಟು 10ಕ್ಕೂ ಅಧಿಕ ಮಂದಿ ಅಸ್ವಸ್ಥರಾಗಿದ್ದಾರೆ ಎಂದು ತಿಳಿದುಬಂದಿದೆ.

ಗ್ರಾಮದಲ್ಲಿ ಶನಿವಾರ ರಾತ್ರಿಯಿಂದಲೇ ವಾಂತಿ-ಭೇದಿಯಿಂದ ಜನರು ಬಳಲುತ್ತಿದ್ದರೂ, ಅಲ್ಲಿನ ಪ್ರಾಥಮಿಕ ಕೇಂದ್ರದಲ್ಲಿ ವೈದ್ಯರು ಸೇರಿದಂತೆ ಯಾವುದೇ ಅಗತ್ಯ ಸೌಲಭ್ಯ ಸಿಗಲಿಲ್ಲ. ಹೀಗಾಗಿ ಅವರನ್ನು ಹುಮನಾಬಾದ್ ಸರ್ಕಾರಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಲಾಗಿದೆ ಎಂದು ರೋಗಿಗಳ ಕುಟುಂಬದವರು ಸುದ್ದಿಗಾರರಿಗೆ ತಿಳಿಸಿದರು.

ದುಬಲಗುಂಡಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ವೈದ್ಯಕೀಯ ಸೌಕರ್ಯ ಸಮರ್ಪಕವಾಗಿ ಸಿಗದಿರುವ ಬಗ್ಗೆ ಸಾರ್ವಜನಿಕರಿಂದ ದೂರು ಕೇಳಿಬಂದ ಹಿನ್ನೆಲೆಯಲ್ಲಿ ಶಾಸಕ ರಾಜಶೇಖರ ಪಾಟೀಲ ಹಾಗೂ ಇತರರು ಭಾನುವಾರ ಬೆಳಿಗ್ಗೆ ಗ್ರಾಮದ ಆಸ್ಪತ್ರೆಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ರೋಗಿಗಳಿಗೆ ಸಮರ್ಪಕ ಚಿಕಿತ್ಸೆ ನೀಡುವಂತೆ ವೈದ್ಯರು ಹಾಗೂ ಸಿಬ್ಬಂದಿಗೆ ಅವರು ತಾಕೀತು ಮಾಡಿದರು. ಸಂಜೆ ಹುಮನಾಬಾದ್ ಆಸ್ಪತ್ರೆಗೆ ಭೇಟಿ ನೀಡಿದ ಶಾಸಕರು, ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸೂಚಿಸಿದರು.

`ವಾಂತಿಭೇದಿ ಪ್ರಕರಣ ಕಂಡುಬಂದ ಹಿನ್ನೆಲೆಯಲ್ಲಿ ನೀರನ್ನು ಪರೀಕ್ಷೆಗೆ ಕಳಿಸಲಾಗಿದೆ. ಪ್ರಕರಣ ಕಾರಣವೇನು ಎಂಬುದನ್ನು ತಿಳಿದುಕೊಂಡು ನೀರಿನಲ್ಲಿ ದೋಷ ಇರುವುದು ಖಚಿತಗೊಂಡಲ್ಲಿ, ಶುದ್ಧ ನೀರು ಪೂರೈಕೆಗೆ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು` ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರತಿಭಾ ವಿಜಯಕುಮಾರ ನಾತೆ ಸುದ್ದಿಗಾರರಿಗೆ ತಿಳಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.