ADVERTISEMENT

ದೈಹಿಕ ಸಾಮರ್ಥ್ಯ ಪರೀಕ್ಷೆ ಮುಂದೂಡಿಕೆ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2012, 19:15 IST
Last Updated 16 ಅಕ್ಟೋಬರ್ 2012, 19:15 IST

ದೈಹಿಕ ಸಾಮರ್ಥ್ಯ ಪರೀಕ್ಷೆ ಮುಂದೂಡಿಕೆ
ಹುಬ್ಬಳ್ಳಿ:
ನೈರುತ್ಯ ರೈಲ್ವೆಯ ಗ್ರೂಪ್-ಡಿ ನೌಕರರ ನೇಮಕಾತಿಗೆ ಸಂಬಂಧಪಟ್ಟ ದೈಹಿಕ ಸಾಮರ್ಥ್ಯ ಪರೀಕ್ಷೆ (ಪಿಇಟಿ)ಯನ್ನು ಇದೇ 30ಕ್ಕೆ ಮುಂದೂಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಈ ಕುರಿತ ಮಾಹಿತಿಯನ್ನು ಈಗಾಗಲೇ ಉದ್ಯೋಗಾಕಾಂಕ್ಷಿಗಳಿಗೆ ಕಳುಹಿಸಲಾಗಿದ್ದು ಅವರ ಕಂಟ್ರೋಲ್ ಸಂಖ್ಯೆಗಳನ್ನು ವೆಬ್‌ಸೈಟ್‌ನಲ್ಲಿ(www.swr.indianrailways.gov.i)ಅಪ್‌ಲೋಡ್ ಮಾಡಲಾಗಿದೆ ಎಂದು ತಿಳಿಸಲಾಗಿದೆ.

ಪರೀಕ್ಷೆಯ ಕರೆ ಪತ್ರ ಸಿಗದವರು 29ರಂದು ಹುಬ್ಬಳ್ಳಿಯಲ್ಲಿರುವ ನೈರುತ್ಯ ರೈಲ್ವೆಯ ನೇಮಕಾತಿ ಘಟಕಕ್ಕೆ ಬಂದು ನಕಲಿ ಕರೆ ಪತ್ರವನ್ನು ಪಡೆದುಕೊಳ್ಳಬೇಕು ಎಂದು ತಿಳಿಸಲಾಗಿದೆ.


ಕಾರವಾರಕ್ಕೂ ಬರಲಿರುವ ರೈಲು
ಹುಬ್ಬಳ್ಳಿ:
ಯಶವಂತಪುರ ಹಾಗೂ ಕಣ್ಣೂರು ಮಧ್ಯೆ ಸಂಚರಿಸುವ ರೈಲು (16517/16518) ಇದೇ 17ರಿಂದ ಕಾರವಾರದ ವರೆಗೆ ಸಂಚಾರ ವಿಸ್ತರಿಸಲಿದೆ ಎಂದು ನೈರುತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ. ಮಂಗಳೂರು ನಿಲ್ದಾಣದಿಂದ ಈ ರೈಲಿನ ಸಂಖ್ಯೆಯನ್ನು ಬದಲಾಯಿಸಿ ಕಣ್ಣೂರು ಹಾಗೂ ಕಾರವಾರದ ಕಡೆಗೆ ತಿರುಗಿಸಲಾಗುವುದು ಎಂದು ತಿಳಿಸಲಾಗಿದೆ.

ಕಣ್ಣೂರು ಕಡೆಗೆ ತೆರಳಲಿರುವ ರೈಲು 16517/16518 ಸಂಖ್ಯೆಯನ್ನು ಹೊಂದಿರುತ್ತದೆ. ಕಾರವಾರದ ಕಡೆಗೆ ತೆರಳಲಿರುವ ರೈಲು 16523/16524 ಸಂಖ್ಯೆಯನ್ನು ಹೊಂದಿರುತ್ತದೆ.

ಆರ್‌ಟಿಪಿಎಸ್‌ನ 3 ಘಟಕ ಸ್ಥಗಿತ
ರಾಯಚೂರು:
ಇಲ್ಲಿಗೆ ಸಮೀಪದ ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರ(ಆರ್‌ಟಿಪಿಎಸ್)ನ 1.2 ಮತ್ತು 8ನೇ ಘಟಕಗಳ ತಾಂತ್ರಿಕ ದೋಷದಿಂದ ವಿದ್ಯುತ್ ಉತ್ಪಾದನೆ ಸ್ಥಗಿತಗೊಂಡಿವೆ. ಒಂದು ಸಾವಿರ ಮೆಗಾವಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಆರ್‌ಟಿಪಿಎಸ್‌ನ 3, 4, 5,6 ಮತ್ತು 7ನೇ ಘಟಕಗಳು ವಿದ್ಯುತ್ ಉತ್ಪಾದನೆಯ ಕಾರ್ಯನಿರತವಾಗಿವೆ. 2.70 ಲಕ್ಷ ಮೆಟ್ರಿಕ್ ಟನ್ ಕಲ್ಲಿದ್ದಲು ಸಂಗ್ರಹಿಸಲಾಗಿದೆ ಎಂದು ಆರ್‌ಟಿಪಿಎಸ್‌ನ ಮೂಲಗಳು ತಿಳಿಸಿವೆ.
 

ಸ್ವಯಂಚಾಲಿತ ಬಸ್ ವಿವರ ಘೋಷಣೆ
ಗುಲ್ಬರ್ಗ:
ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣ ಸೇರಿದಂತೆ ಅನೇಕ ಕಡೆಗಳಲ್ಲಿ ಬಸ್ ಹೊರಡುವ ಬಗ್ಗೆ ಧ್ವನಿವರ್ಧಕಗಳ ಮೂಲಕ ಘೋಷಣೆ ಮಾಡುವ ವ್ಯವಸ್ಥೆ ಇದೆ. ಇದೇ ಮೊದಲ ಬಾರಿಗೆ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಎನ್‌ಇಕೆಎಸ್‌ಆರ್‌ಟಿಸಿ)ಯಲ್ಲಿ `ರೇಡಿಯೊ ಫ್ರಿಕ್ವೆನ್ವಿ ಐಡೆಂಟಿಫಿಕೇಷನ್-ಆರ್‌ಎಫ್‌ಐಡಿ~ ಮೂಲಕ  ಘಟಕದಿಂದ ಬಸ್ ಹೊರಡುವ ಬಗ್ಗೆ ಸ್ವಯಂಚಾಲಿತವಾಗಿ ಘೋಷಣೆಯಾಗುವ ತಂತ್ರಜ್ಞಾನ ಅಳವಡಿಸಲಾಗಿದೆ.

ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಜಿ.ಎನ್. ಶಿವಮೂರ್ತಿ ಈ ಕುರಿತು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದರು.

ಯೂರಿಯ ಕೊರತೆ: ರೈತರಿಂದ ಕಲ್ಲು ತೂರಾಟ
ಮದ್ದೂರು
: ಇಲ್ಲಿಗೆ ಸಮೀಪದ ಕೆಸ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಯೂರಿಯ ರಸಗೊಬ್ಬರ ಸಮರ್ಪಕ ವಿತರಣೆಗೆ ಆಗ್ರಹಿಸಿ ರೈತರು ಹೆದ್ದಾರಿ ತಡೆ ಪ್ರತಿಭಟನೆ ನಡೆಸಿ ಸಂಘದ ಕಚೇರಿಗೆ ಕಲ್ಲು ತೂರಾಟ ನಡೆಸಿದ ಘಟನೆ ಮಂಗಳವಾರ ನಡೆದಿದೆ.  

ಕಳೆದ ಎರಡು ದಿನಗಳಿಂದ ಗೊಬ್ಬರಕ್ಕಾಗಿ ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿ ಎದುರು ರೈತರು ಸರತಿ ಸಾಲಿನಲ್ಲಿ ನಿಂತಿದ್ದರು. ಮಂಗಳವಾರ ಕೂಡ ಯೂರಿಯ ದಾಸ್ತಾನು ಬಂದಿಲ್ಲ ಎಂದು ಸಂಘದ ಸಿಬ್ಬಂದಿ ತಿಳಿಸಿದ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ರೈತರು ಸಂಘದ ಕಚೇರಿಯೊಳಗೆ ನುಗ್ಗಿ ಪೀಠೋಪಕರಣಗಳನ್ನು ಎಳೆದಾಡಿದರು. ಆ ಸಂದರ್ಭದಲ್ಲಿ ಸಂಘದ ಸಿಬ್ಬಂದಿ ಹಾಗೂ ರೈತರ ನಡುವೆ ಪರಸ್ಪರ ತಳ್ಳಾಟ ನೂಕಾಟ ನಡೆಯಿತು.

ಕೆಲವು ರೈತರು ಕಚೇರಿಗೆ ಕಲ್ಲು ತೂರಾಟ ನಡೆಸಿದರು. ಪ್ರತಿಭಟನಾನಿರತರಾಗಿದ್ದ ರಾಜು, ಪ್ರಕಾಶ, ಬಾಲರಾಜು ಸೇರಿದಂತೆ ಆರೇಳು ಮಂದಿಗೆ ಕಲ್ಲು ಏಟುಗಳು ಬಿದ್ದವು. ಅಷ್ಟರಲ್ಲಿ ಎಚ್ಚೆತ್ತ ಸಂಘದ ಸಿಬ್ಬಂದಿ ಕಚೇರಿಯ ರೋಲಿಂಗ್ ಶೆಟರ್ ಮುಚ್ಚಿದ ಪರಿಣಾಮ ಹೆಚ್ಚಿನ ಯಾವುದೇ ಅನಾಹುತ ಸಂಭವಿಸಲಿಲ್ಲ.

ಗ್ರಾಮ ಪಂಚಾಯಿತಿ ಸದಸ್ಯ ಚಂದ್ರಹಾಸ್, ಮುಖಂಡರಾದ ನಿಂಗಪ್ಪ, ರವೀಶ್, ಶ್ರೀನಿವಾಸ್, ಸುರೇಶ್, ರಮೇಶ್, ರಾಜಣ್ಣ, ಸುನೀಲ್, ಕುಮಾರ್ ಇದ್ದರು.
 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.