ADVERTISEMENT

ದೌರ್ಜನ್ಯ: ತಡೆಗೆ ಹೋರಾಟ ಅಗತ್ಯ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2011, 19:30 IST
Last Updated 22 ಮಾರ್ಚ್ 2011, 19:30 IST

ಕನಕಪುರ:  ಗಿರಿಜನರಿಗೆ ಸರ್ಕಾರದಿಂದ ದೊರೆಯವ ಸೌಲಭ್ಯಗಳು ತಲುಪಬೇಕು, ಅವರ ಮೇಲೆ ನಡೆಯುತ್ತಿರುವ ಶೋಷಣೆ ಮತ್ತು ದೌರ್ಜನ್ಯ ತಡೆಗೆ ಒಗ್ಗಟ್ಟಿನಿಂದ ಹೋರಾಡಬೇಕು ಎಂದು ರಾಮನಗರ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಮಾದೇವಿ ಹೇಳಿದರು. ಪಟ್ಟಣದ ಸಮೃದ್ಧಿ ಸಂಸ್ಥೆ ಮತ್ತು ಆದಿವಾಸಿಗಳು ಹಮ್ಮಿಕೊಂಡಿದ್ದ ಸನ್ಮಾನ ಸ್ವೀಕಾರ ಸಮಾರಂಭದಲ್ಲಿ ಅವರು ಮಾತನಾಡಿದರು. ಸಾಮಾಜಿಕ ಮತ್ತು ಶೈಕ್ಷಣಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಹಿಂದುಳಿದಿರುವ ಆದಿವಾಸಿಗಳಿಗೆ ರಾಮನಗರ ಜಿಲ್ಲಾ ಪಂಚಾಯಿತಿಯಲ್ಲಿ ಉಪಾಧ್ಯಕ್ಷ ಸ್ಥಾನ ದೊರೆತಿರುವುದು ಶ್ಲಾಘನೀಯಎಂದರು. 

ಆದಿವಾಸಿಗಳು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು. ಸರ್ಕಾರದ ಸೌಲಭ್ಯಗಳನ್ನು ಪಡೆದು ಅಭಿವೃದ್ಧಿ ಹೊಂದುವುದರ ಜೊತೆಗೆ ದುಶ್ಚಟಗಳಿಂದ ದೂರವಿರಬೇಕು. ಸರ್ಕಾರ ಗಿರಿಜನರ ಕಲ್ಯಾಣಕ್ಕೆ ಹಲವು ಯೋಜನೆಗಳನ್ನು ರೂಪಿಸಿದೆ. ಈ ಯೋಜನೆಗಳ ಬಗ್ಗೆ ಮಾಹಿತಿ ಪಡೆದು ಅವುಗಳ ಸದುಪಯೋಗಕ್ಕೆ ಮುಂದಾಗಬೇಕು ಎಂದು  ಕಿವಿ ಮಾತು ಹೇಳಿದರು. ಸಮೃದ್ಧಿ ಸಂಸ್ಥೆ ನಿರ್ದೇಶಕ ಬಿ.ಶಿವರಾಜೇಗೌಡ ಮಾತನಾಡಿ, ಇಂದು ಎಲ್ಲ ಕ್ಷೇತ್ರಗಳಲ್ಲಿರುವಂತೆ ರಾಜಕೀಯ ಕ್ಷೇತ್ರದಲ್ಲಿ ಪೈಪೋಟಿ ಹೆಚ್ಚಾಗಿದೆ. ಆದಿವಾಸಿಗಳು ಇದನ್ನು ಅರಿತು ಒಗ್ಗೂಡಬೇಕಾದ ಅನಿವಾರ್ಯತೆ ಇದೆ ಎಂದರು.

ಆದಿವಾಸಿಗಳ ಮೇಲೆ ಲೈಂಗಿಕ ಕಿರುಕುಳ ಮತ್ತು ಅವರಿಗೆ ಮಂಜೂರಾಗಿರುವ ಜಮೀನಿನ ಮೇಲೆ ಬೇರೋಬ್ಬರು ದೌರ್ಜನ್ಯವೆಸಗುತ್ತಿರುವುದಕ್ಕೆ ನಾಗರಿಕ ಸಮಾಜ ತಲೆತಗ್ಗಿಸಬೇಕು.ಈ ರೀತಿಯ ಶೋಷಣೆ ಮತ್ತು ದೌರ್ಜನ್ಯವನ್ನು ಮೆಟ್ಟಿನಿಲ್ಲುವಂತಹ ಪ್ರವೃತ್ತಿಯನ್ನು ಬೆಳಸಿಕೊಳ್ಳಬೇಕು. ತಮ್ಮ ಸಾಮಾಜಿಕ ಸ್ಥಾನಮಾನಗಳ ಹೆಚ್ಚಳಕ್ಕೆ ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.

 

ತಾಲ್ಲೂಕು ಪಂಚಾಯಿತಿ ಸದಸ್ಯೆ ಸರೋಜಮ್ಮ ರಾಮಸ್ವಾಮಿ, ವಿವೇಕಾನಂದ ಪ್ರಶಸ್ತಿ ಪುರಸ್ಕೃತೆ ಪಾರ್ವತಮ್ಮ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಗಿರಿಜನ ಮುಖಂಡರಾದ ರಾಮಸ್ವಾಮಿ, ದೊಡ್ಡಮರಿ, ಶಿವರಾಜು, ಸಿದ್ದರಾಮ, ಕೆಂಪರಾಜು, ವೆಂಕಟರಮಣ, ಬಂಗಾರಯ್ಯ, ಕಬ್ಬಾಳಮ್ಮ, ಗೌರಮ್ಮ ಮತ್ತಿತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT