ADVERTISEMENT

ಧರ್ಮವಂತರಾಗಲು ದಂಪತಿಗಳಿಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2011, 19:30 IST
Last Updated 6 ಏಪ್ರಿಲ್ 2011, 19:30 IST

ವಿಜಾಪುರ: ತಾಲ್ಲೂಕಿನ ಕತಕನಹಳ್ಳಿಯಲ್ಲಿ ಬುಧವಾರ ಮದುವೆಯ ಸಂಭ್ರಮ. ಶ್ರೀಗುರು ಚಕ್ರವರ್ತಿ ಸದಾಶಿವ ಜಾತ್ರೆಯ ಅಂಗವಾಗಿ ಹಮ್ಮಿಕೊಂಡಿದ್ದ ಉಚಿತ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ 72 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ವಿವಾಹ ಮಹೋತ್ಸವದ ಸಾನ್ನಿಧ್ಯ ವಹಿಸಿದ್ದ ಸೊನ್ನ ದಾಸೋಹ ಮಠದ ಶ್ರೀ ಶಿವಾನಂದ ಮಹಾಸ್ವಾಮಿಗಳು, ‘ವ್ಯಕ್ತಿಯ ಜೀವನದಲ್ಲಿ ಗೃಹಸ್ಥಾಶ್ರಮ ಮಹತ್ವವಾದುದು. ನೂತನ ದಂಪತಿ ಧರ್ಮವಂತರಾಗಬೇಕು. ಸತಿಯಿಂದಲೇ ಸದ್ಗತಿ. ಗಂಡ-ಹೆಂಡತಿ ಸದಾಕಾಲ ಹೊಂದಾಣಿಕೆಯ ಜೀವನ ನಡೆಸುವುದು ಭಾರತೀಯ ಸಂಸ್ಕೃತಿ’ ಎಂದರು.

ಅತ್ತೆ- ಮಾವಂದಿರನ್ನು ಗೌರವದಿಂದ ಕಾಣಬೇಕು. ಕುಳಿತು ಉಂಡರೆ ಕುಡಿಕೆ ಹೊನ್ನು ಸಾಲದು. ಕಾಯಕವೇ ಕೈಲಾಸ. ಅದಕ್ಕಾಗಿ ಎಲ್ಲರೂ ಶ್ರಮಜೀವಿಗಳಾಗಬೇಕು. ಪೂಜ್ಯನೀಯರಾಗಲು ಜಾತಿಯ ನಿರ್ಬಂಧವಿಲ್ಲ, ನಡತೆ ಮುಖ್ಯವಾದುದು ಎಂದು ಹೇಳಿದರು.

ಕತಕನಹಳ್ಳಿ-ಚಮಕೇರಿ ಶ್ರೀ ಗುರು ಚಕ್ರವರ್ತಿ ಸದಾಶಿವ ಮಠದ ಶ್ರೀ ಶಿವಯ್ಯ ಸ್ವಾಮಿಗಳು ನೇತೃತ್ವ ವಹಿಸಿದ್ದರು. ವೇದಮೂರ್ತಿ ಬಸಯ್ಯ ಗಚ್ಚಿನಮಠ ಸಾಮೂಹಿಕ ವಿವಾಹ ನೆರವೇರಿಸಿದರು.

ಶಾಸಕರಾದ ವಿಠ್ಠಲ ಕಟಕಧೋಂಡ, ಅಪ್ಪು ಪಟ್ಟಣಶೆಟ್ಟಿ, ಪ್ರಮುಖರಾದ ಬಾಬುಗೌಡ ಬಿರಾದಾರ, ಎಸ್.ಎಂ. ಪಾಟೀಲ ಗಣಿಹಾರ, ವಾಸ್ತುತಜ್ಞ ಗಿರಿಧರ ರಾಜು, ನಗರಸಭೆ ಸದಸ್ಯರು, ಎ.ಪಿ.ಗ್ರೂಪ್‌ನ ಪದಾಧಿಕಾರಿಗಳು ಮತ್ತಿತರರು ಪಾಲ್ಗೊಂಡಿದ್ದರು.

 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.