ADVERTISEMENT

ನಾಮಪತ್ರ ಸಲ್ಲಿಕೆಗೆ ನೂಕುನುಗ್ಗಲು

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2010, 9:45 IST
Last Updated 21 ಡಿಸೆಂಬರ್ 2010, 9:45 IST
ನಾಮಪತ್ರ ಸಲ್ಲಿಕೆಗೆ ನೂಕುನುಗ್ಗಲು
ನಾಮಪತ್ರ ಸಲ್ಲಿಕೆಗೆ ನೂಕುನುಗ್ಗಲು   

ಕೊಪ್ಪಳ: ಡಿ. 31ರಂದು ನಡೆಯಲಿರುವ ಚುನಾವಣೆ ಹಿನ್ನೆಲೆಯಲ್ಲಿ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದರಿಂದ ಪ್ರಮುಖ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಹಾಗೂ ಪಕ್ಷೇತರ ಉಮೇದುವಾರರು ಸೋಮವಾರ ನಾಮಪತ್ರ ಸಲ್ಲಿಸಿದರು.

ವಿವಿಧ ಪಕ್ಷಗಳ ಅಭ್ಯರ್ಥಿಗಳು ತಮ್ಮ ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸಲು ಆಗಮಿಸಿದ್ದರಿಂದ ಇಲ್ಲಿನ ತಹಸೀಲ್ದಾರ ಕಚೇರಿ ಆವರಣ ಜನರಿಂದ ತುಂಬಿತ್ತು. ಆಯಾ ಪಕ್ಷಗಳ ಬಾವುಟಗಳನ್ನು ಹಿಡಿದುಕೊಂಡಿದ್ದ ಕಾರ್ಯಕರ್ತರ ಓಡಾಟ, ಸಂಭ್ರಮ ಕಾಣಬಹುದಾಗಿತ್ತು.

ತಾಲ್ಲೂಕು ವ್ಯಾಪ್ತಿಯಲ್ಲಿ ಬರುವ ಏಳು ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಜೆಡಿಎಸ್ ಅಭ್ಯರ್ಥಿಗಳು ಪಕ್ಷದ ಜಿಲ್ಲಾ ಅಧ್ಯಕ್ಷರೂ ಆಗಿರುವ ಶಾಸಕ ಸಂಗಣ್ಣ ಕರಡಿ ನೇತೃತ್ವದಲ್ಲಿ ಬನ್ನಿಕಟ್ಟಿ ಪ್ರದೇಶದಿಂದ ತಹಸೀಲ್ದಾರ ಕಚೇರಿ ವರೆಗೆ ಮೆರವಣಿಗೆಯಲ್ಲಿ ಆಗಮಿಸಿದರು.

ಅದೇ ರೀತಿ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳು ಇಲ್ಲಿನ ಮುಂಡರಗಿ ಭೀಮರಾಯ ವೃತ್ತ, ತಮ್ಮ ನಾಯಕರ ಮನೆಗಳಿಂದ ತಹಸೀಲ್ದಾರ ಕಚೇರಿ ವರೆಗೆ ಮೆರವಣಿಗೆಯಲ್ಲಿ ಆಗಮಿಸಿ ನಾಮಪತ್ರ ಸಲ್ಲಿಸಿದರು.

ನಾಮಪತ್ರ ಸಲ್ಲಿಸಲು ವಿವಿಧ ಪಕ್ಷಗಳು ಮುಖಂಡರು, ಕಾರ್ಯಕರ್ತರು ಆಗಮಿಸಿದ್ದರಿಂದ ತಹಸೀಲ್ದಾರ ಕಚೇರಿ ಹೊರಗಡೆ ವಾಹನಗಳ ದಟ್ಟಣೆ ಇತ್ತು. ಅದರಲ್ಲೂ, ಕಚೇರಿ ಹತ್ತಿರವೇ ಇರುವ ಮುಂಡರಗಿ ಭೀಮರಾಯ ವೃತ್ತದಲ್ಲಿ ಬಹುಹೊತ್ತಿನ ವರೆಗೆ ಟ್ರಾಫಿಕ್ ಜಾಮ್‌ನಿಂದಾಗಿ ವಾಹನ ಸವಾರರು ಪರದಾಡಿದರು.

ನಾಮಪತ್ರ ಭರ್ತಿ ಮಾಡುವ ಸಲುವಾಗಿ ಚುನಾವಣಾ ವಿಭಾಗದ ಕುರ್ಚಿ-ಮೇಜುಗಳನ್ನು ಆಕ್ರಮಿಸಿ, ರಾಜಾರೋಷವಾಗಿ ಕುಳಿತಿದ್ದ ಕೆಲವು ಪಕ್ಷಗಳ ಕಾರ್ಯಕರ್ತರ ವರ್ತನೆಗೆ ವ್ಯಾಪಕ ಟೀಕೆಯೂ ವ್ಯಕ್ತವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.