ADVERTISEMENT

ನೀರಿಗಾಗಿ ಗ್ರಾಮಸ್ಥರ ಧರಣಿ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2011, 18:40 IST
Last Updated 14 ಸೆಪ್ಟೆಂಬರ್ 2011, 18:40 IST

ಚನ್ನರಾಯಪಟ್ಟಣ: ಶ್ರೀರಾಮದೇವರ ಉತ್ತರ ನಾಲೆಯಿಂದ ಕಿಕ್ಕೇರಿ ಹೋಬಳಿಯ ಅಚ್ಚುಕಟ್ಟು ಪ್ರದೇಶಕ್ಕೆ ಸಮರ್ಪಕ ನೀರು ಹರಿಸಲು ಆಗ್ರಹಿಸಿ ಕೆ.ಆರ್.ಪೇಟೆ ತಾಲ್ಲೂಕು ಕಿಕ್ಕೇರಿ ಹೋಬಳಿಯ ವಿವಿಧ ಗ್ರಾಮಸ್ಥರು  ಬುಧವಾರ ಇಲ್ಲಿ ಕಾವೇರಿ ನೀರಾವರಿ ನಿಗಮದ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ವಿಧಾನಸಭೆಯ ಮಾಜಿ ಸ್ಪೀಕರ್ ಕೃಷ್ಣ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ರೈತರು ಗಾಣದಹಳ್ಳಿ, ಗೊಂದಿಹಳ್ಳಿ, ಚಿನ್ನೇನಹಳ್ಳಿ, ಕೋಟಹಳ್ಳಿ, ಮಾದಾಪುರ, ದಾಂಡನಹಳ್ಳಿ, ಬೀದರಹಳ್ಳಿ, ಹೂಗಿನಹಳ್ಳಿ, ಗೋವಿಂದನಹಳ್ಳಿ, ಗೊಲ್ಲರಕೊಪ್ಪಲು, ತೆಂಗಿನಘಟ್ಟ,  ಜುಜ್ಜಲಕ್ಯಾತನಹಳ್ಳಿ, ರಾಮನಹಳ್ಳಿ, ಕಾಳೇನಹಳ್ಳಿ ಗ್ರಾಮದ ಸಾವಿರಾರು ಎಕರೆ ಜಮೀನಿಗೆ ನೀರು ಹರಿಯುತ್ತಿಲ್ಲ.

 ಇದಕ್ಕೆ ನಾಲೆಯಲ್ಲಿ ಹೂಳು ತುಂಬಿರುವುದು ಕಾರಣ. 2008-09ರಲ್ಲಿ ಶ್ರೀರಾಮದೇವರ ಉತ್ತರನಾಲೆಯನ್ನು 200 ಕೋಟಿ ರೂ. ವೆಚ್ಚದಲ್ಲಿ ಆಧುನೀಕರಣಗೊಳಿಸಲಾಯಿತಾದರೂ ಈಗ ಉಪಯೋಗಕ್ಕೆ ಬಾರದಂತಾಗಿದೆ ಎಂದು ಟೀಕಿಸಿದರು.

2 ವರ್ಷಗಳಿಂದ ನಾಲೆಯಲ್ಲಿ ನೀರು ಸರಾಗವಾಗಿ ಹರಿಯಿತು. ಈ ವರ್ಷ ಏಕೆ ಸಮಸ್ಯೆ ಉದ್ಭವಿಸಿತು ಎಂದು ಅಧಿಕಾರಿಗಳನ್ನು ಪ್ರಶ್ನಿಸಿದ ಮಾಜಿ ಸ್ಪೀಕರ್ ಕೃಷ್ಣ, ತಕ್ಷಣ ನಾಲೆಯಲ್ಲಿ ಹೂಳು ಎತ್ತಿ   ಸರಾಗವಾಗಿ ನೀರು ಹರಿಸಬೇಕು ಎಂದು ಆಗ್ರಹಿಸಿದರು.

ಇನ್ನೂ ಮೂರು ದಿನಗಳದೊಳಗೆ ನಾಲೆಯಲ್ಲಿ ಹೂಳು ಎತ್ತಿಸಿ ಅಚ್ಚುಕಟು ಪ್ರದೇಶಕ್ಕೆ ನೀರು ಹರಿಸಲು ಕ್ರಮ  ಕೈಗೊಳ್ಳುವುದಾಗಿ ನೀರಾವರಿ ನಿಗಮದ ಅಧೀಕ್ಷಕ ಎಂಜಿನಿಯರ್ ಎಂ.ಬಾಲಸುಬ್ರಹ್ಮಣ್ಯಂ ಅವರು ಭರವಸೆ ನೀಡಿದರು.

ತೇಜಸ್ವಿ ಕಿರಣ್, ರಾಮೇಗೌಡ, ಪುಟ್ಟಸ್ವಾಮಿ, ಬೋಜೇಗೌಡ, ವೆಂಕಟಸುಬ್ಬೇಗೌಡ, ಮಂಜೇಗೌಡ, ಮಂಜು, ಡಿ.ಎಲ್. ದೇವರಾಜು, ಜವರೇಗೌಡ ನೇತೃತ್ವ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.