ADVERTISEMENT

ನುಗ್ಗೇಹಳ್ಳಿ ಕೆರೆಗೆ ಶೀಘ್ರ ನೀರು: ಶಾಸಕ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2012, 19:30 IST
Last Updated 2 ಏಪ್ರಿಲ್ 2012, 19:30 IST

ಚನ್ನರಾಯಪಟ್ಟಣ: ಕುಡಿಯುವ ನೀರು ಯೋಜನೆಗಾಗಿ ನುಗ್ಗೇಹಳ್ಳಿ ಕೆರೆಗೆ ನೀರು ಹರಿಸಲು ರಾಜ್ಯ ಸರ್ಕಾರ 17.85 ಕೋಟಿ ರೂ. ಬಿಡುಗಡೆ ಮಾಡಿದ್ದು, ಸದ್ಯದಲ್ಲಿ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ಶಾಸಕ ಸಿ.ಎಸ್. ಪುಟ್ಟೇಗೌಡ ಹೇಳಿದರು.

ತಾಲ್ಲೂಕಿನ ನುಗ್ಗೇಹಳ್ಳಿ ಗ್ರಾಮದಲ್ಲಿ ಸೋಮವಾರ ಏರ್ಪಡಿಸಿದ್ದ ~ಗ್ರಾಮಸ್ಥರ ಸಭೆ~ಯಲ್ಲಿ ಮಾತನಾಡಿದರು.
ಬಾಗೂರು ಏತ ನೀರಾವರಿ ಯೋಜನೆಯ ಪ್ರವೇಶದಲ್ಲಿರುವ ನಾಲೆ ಮೂಲಕ ನುಗ್ಗೇಹಳ್ಳಿ ಕೆರೆಗೆ ನೀರು ಹರಿಸಲಾಗುವುದು. ಈ ಯೋಜನೆಗೆ ಸಂಪುಟ ಒಪ್ಪಿಗೆ ನೀಡಿದ್ದು, ಸದ್ಯದಲ್ಲಿ ಟೆಂಡರ್ ಕರೆಯಲಾಗುವುದು. ಶಂಕುಸ್ಥಾಪನೆಯ ದಿನಾಂಕ ನಿಗದಿಗೊಳಿಸಿ ಮುಖ್ಯಮಂತ್ರಿ ಸೇರಿ ಸಂಬಂಧಿಸಿದ ಸಚಿವರು, ಅಧಿಕಾರಿಗಳನ್ನು ಆಹ್ವಾನಿಸಲಾಗುವುದು ಎಂದರು.

ಕೆರೆಗೆ ನೀರು ಹರಿಸುವುದರಿಂದ ಈ ಭಾಗದಲ್ಲಿನ ಕುಡಿಯುವ ನೀರಿನ ಬವಣೆ ನೀಗಲಿದೆ. ಸುತ್ತಲು ಅಂತರ್ಜಲ ಹೆಚ್ಚಾಗಲಿದೆ. ಹಿರೀಸಾವೆ -ಶ್ರವಣಬೆಳಗೊಳ ಏತ ನೀರಾವರಿ ಯೋಜನೆಗೆ ಸದ್ಯದಲ್ಲಿ ಸರ್ಕಾರ ಒಪ್ಪಿಗೆ ನೀಡಲಿದೆ ಎಂದು ಹೇಳಿದರು.

ತಾ.ಪಂ. ಅಧ್ಯಕ್ಷ ರಂಗಮ್ಮ ರಾಮಕೃಷ್ಣೇಗೌಡ, ಜಿ.ಪಂ ಮಾಜಿ ಉಪಾಧ್ಯಕ್ಷ ಎ.ಈ. ಚಂದ್ರಶೇಖರ್. ಎಚ್‌ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಿ.ಎನ್. ಬಾಲಕೃಷ್ಣ, ಬ್ಯಾಂಕಿನ ಮಾಜಿ ಉಪಾಧ್ಯಕ್ಷ ಕೆಂಪನಂಜೇಗೌಡ, ಎಪಿಎಂಸಿ ನಿರ್ದೇಶಕ ಬಿ.ಆರ್. ದೊರೆಸ್ವಾಮಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.