ADVERTISEMENT

ಪಡುಬಿದ್ರಿ: 9ರಿಂದ ಪೇಜಾವರ ಶ್ರೀ ಉಪವಾಸ

​ಪ್ರಜಾವಾಣಿ ವಾರ್ತೆ
Published 6 ಜನವರಿ 2012, 19:30 IST
Last Updated 6 ಜನವರಿ 2012, 19:30 IST
ಪಡುಬಿದ್ರಿ: 9ರಿಂದ ಪೇಜಾವರ ಶ್ರೀ ಉಪವಾಸ
ಪಡುಬಿದ್ರಿ: 9ರಿಂದ ಪೇಜಾವರ ಶ್ರೀ ಉಪವಾಸ   

ಉಡುಪಿ: ನಂದಿಕೂರಿನ ಯುಪಿಸಿಎಲ್ ಉಷ್ಣವಿದ್ಯುತ್ ಸ್ಥಾವರದಿಂದ ಸುತ್ತಮುತ್ತಲ ಪರಿಸರಕ್ಕೆ ಉಂಟಾಗಿದ್ದ ಹಾನಿಯನ್ನು ಅಧ್ಯಯನ ಮಾಡಲು ನಿಯೋಜಿಸಿದ್ದ ತಜ್ಞರ ಸಮಿತಿಯ ಅಧ್ಯಕ್ಷರಾಗಿದ್ದ ವೈ.ಬಿ.ರಾಮಕೃಷ್ಣ ಹಾಗೂ ಸದಸ್ಯ ಪಿ.ವಿ.ರಾಮಚಂದ್ರ ಅವರನ್ನು ಯಾವುದೇ ಮುನ್ಸೂಚನೆ ಇಲ್ಲದೇ ಕೈಬಿಟ್ಟಿರುವುದನ್ನು ಖಂಡಿಸಿರುವ ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿ, ಸರ್ಕಾರದ ಈ ನಿರ್ಧಾರವನ್ನು  ಪ್ರತಿಭಟಿಸಿ ಇದೇ 9ರಿಂದ 11ರವರೆಗೆ ಪಡುಬಿದ್ರಿ ದೇವಸ್ಥಾನದಲ್ಲಿ ಉಪವಾಸ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಈ ಬಗ್ಗೆ ಶುಕ್ರವಾರ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಸ್ವಾಮೀಜಿ, `ತಮ್ಮ ಆಸೆಯಂತೆ ಸರ್ಕಾರ ತಜ್ಞರ ಸಮಿತಿಯಲ್ಲಿ ಆರು ಮಂದಿಯನ್ನು ನೇಮಿಸಿತ್ತು. ಆದರೆ ಯಾವುದೇ ಕಾರಣ ತಿಳಿಸದೇ ಅವರನ್ನು ಡಿ.29ರಂದೇ ಕೈಬಿಟ್ಟಿದೆ. ಈ ವಿಚಾರದ ಬಗ್ಗೆ ಸರ್ಕಾರ ತಮ್ಮ ಬಳಿ ಕೂಡ ಸಮಾಲೋಚನೆ ಮಾಡಿರಲಿಲ್ಲ~ ಎಂದು ಅವರು ದೂರಿದ್ದಾರೆ.

`ಯುಪಿಸಿಎಲ್ ಪರಿಸರದಲ್ಲಿ ಆಗಿರುವ ಹಾನಿಯನ್ನು ಅಧ್ಯಯನ ಮಾಡಲು ಬಹಳಷ್ಟು ಆಗ್ರಹ ಮಾಡಿದ ಮೇಲೆ ಸರ್ಕಾರ ತಜ್ಞರ ಸಮಿತಿಯನ್ನು ನೇಮಕ ಮಾಡಿತ್ತು. ಈಗ ಸಮಿತಿಯಿಂದ ಕೈಬಿಟ್ಟಿರುವ ಇಬ್ಬರನ್ನು ತಮ್ಮ ಒತ್ತಾಯದ ಮೇರೆಗೆ ಸರ್ಕಾರ ನೇಮಿಸಿತ್ತು. ಆದರೆ ಹಠಾತ್ ಆಗಿ ಅವರನ್ನು ಸಮಿತಿಯಿಂದ ಕಿತ್ತು ಹಾಕಿದ್ದು ಬಹಳ ಅಚ್ಚರಿ ಮೂಡಿಸಿದೆ. ಮಾತ್ರವಲ್ಲ ಇದು ನನಗೆ ಮಾಡಿದ ಅವಮಾನ. ಅಷ್ಟೇ ಅಲ್ಲ, ಈ ಭಾಗದ ಜನರಿಗೆ ಮಾಡಿದ ದ್ರೋಹ. ಇದರಿಂದ ನನಗೆ ನೋವಾಗಿದೆ~ ಎಂದು ಸ್ವಾಮೀಜಿ ತಿಳಿಸಿದ್ದಾರೆ. `ಮುಖ್ಯಮಂತ್ರಿ ಜತೆಗೆ ಈ ಘಟನೆಯ ಬಗ್ಗೆ ವಿಚಾರಿಸಿದಾಗ ಜಿಲ್ಲಾ ಉಸ್ತುವಾರಿ ಸಚಿವರ ಮೂಲಕ ಈ ಆದೇಶ ಹೊರಡಿಸಲಾಗಿದೆ.

ಅವರನ್ನೇ ವಿಚಾರಿಸಿ ಎನ್ನುವ ಉತ್ತರ ದೊರಕಿದೆ. ಆದರೆ ಉಸ್ತುವಾರಿ ಸಚಿವ ಡಾ.ವಿ.ಎಸ್.ಆಚಾರ್ಯ ಅವರನ್ನು  ಸಂಪರ್ಕಿಸಿದಾಗ ಅವರು ನೀಡಿದ ಉತ್ತರ ಸಮಾಧಾನಕರವಾಗಿಲ್ಲ. ಆದ್ದರಿಂದ ಈ ವಿಷಯದಲ್ಲಿ ಸಾತ್ವಿಕ ಪ್ರತಿಭಟನೆಯನ್ನು ಪಡುಬಿದ್ರಿ ದೇವಸ್ಥಾನದಲ್ಲಿ ಮೂರು ದಿನ ಹಮ್ಮಿಕೊಳ್ಳುತ್ತಿದ್ದು, ಆ ಭಾಗದ ಗ್ರಾಮಸ್ಥರು ಸಹಕರಿಸಬೇಕು~ ಎಂದು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.