ADVERTISEMENT

ಪರಿಶಿಷ್ಟ ಜಾತಿ ಪ್ರಮಾಣಪತ್ರಕ್ಕೆ ಮನವಿ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2012, 19:30 IST
Last Updated 7 ಏಪ್ರಿಲ್ 2012, 19:30 IST

ಸಿಂಧನೂರು: ಭಾರತ ವಿಭಜನೆ ನಂತರ ತಾಲ್ಲೂಕಿನಲ್ಲಿ ಪುನರ್ವಸತಿ ಪಡೆದಿರುವ ಐದು ಕ್ಯಾಂಪ್‌ಗಳ ನಮಶೂದ್ರ ಜನಾಂಗದವರಿಗೆ ಪರಿಶಿಷ್ಟ ಜಾತಿ ಪ್ರಮಾಣಪತ್ರ ನೀಡುವಂತೆ ಜನರು ಮನವಿ ಮಾಡಿದರು.

ಪುನರ್ವಸತಿ ಕ್ಯಾಂಪ್ 2ರಲ್ಲಿ ಶನಿವಾರ ಜರುಗಿದ ಜನಸ್ಪಂದನ ಸಭೆಯಲ್ಲಿ ಮಾತನಾಡಿದ ಜನಕಲ್ಯಾಣ ಸಮಿತಿಯ ಮುಖಂಡ ಪ್ರೆಸೇನ್ ರಪ್ತಾನ್ ಪಶ್ಚಿಮ ಬಂಗಾಳದಲ್ಲಿ ನಮಶೂದ್ರ ಜನಾಂಗವನ್ನು ಪರಿಶಿಷ್ಟ ಜಾತಿಯಲ್ಲಿ ಪರಿಗಣಿಸಲಾಗಿದೆ. ಒಡಿಶಾ, ಆಸ್ಸಾಂ, ತ್ರಿಪುರಾ, ಮೇಘಾಲಯ, ಮಣಿಪುರ ರಾಜ್ಯಗಳಲ್ಲಿ ಪರಿಶಿಷ್ಟ ಜಾತಿ ಪ್ರಮಾಣಪತ್ರ ನೀಡಲಾಗುತ್ತಿದೆ.

ಆದರೆ ನಂ.1ರಿಂದ 5ರವರೆಗಿನ ಪುನರ್ವಸತಿ ಕ್ಯಾಂಪ್‌ಗಳಲ್ಲಿ ನೆಲೆಸಿರುವ ನಮಶೂದ್ರರನ್ನು ಸಾಮಾನ್ಯ ವರ್ಗದವರೆಂದು ಪರಿಗಣಿಸಲಾಗುತ್ತಿದೆ. ಇದರಿಂದ ತಮಗೆ ಅನ್ಯಾಯವಾಗಿದೆ. 42 ವರ್ಷಗಳಿಂದ ವಾಸಿಸುತ್ತಿರುವ ತಮಗೆ ನೀಡಿರುವ ನಾಲ್ಕು ಎಕರೆ ಭೂಮಿಯ ಮಾಲೀಕತ್ವ ಹಸ್ತಾಂತರಿಸಬೇಕು. ಒಂದು ಭಾಷೆಯಾಗಿ ಬಂಗಾಲಿ ಕಲಿಯಲು ಅವಕಾಶ ಕಲ್ಪಿಸಬೇಕು. ಭಾರತೀಯ ನಾಗರಿಕತ್ವ ನೀಡಬೇಕು. ಪುನರ್ವಸತಿ ಕ್ಯಾಂಪ್‌ಗಳಿಗೆ ಪ್ರತ್ಯೇಕ ಗ್ರಾಮ ಪಂಚಾಯಿತಿಯನ್ನು ರಚಿಸುವಂತೆ ಒತ್ತಾಯಿಸಲಾಯಿತು.

ಅವರ ಬೇಡಿಕೆಗಳಿಗೆ ಪ್ರತಿಕ್ರಿಯಿಸಿ ಮಾತನಾಡಿದ ತಹಶೀಲ್ದಾರ್ ಕೆ.ನರಸಿಂಹ ಬೇಡಿಕೆಗಳ ಈಡೇರಿಕೆಗೆ ಸ್ಪಂದಿಸುವುದಾಗಿ ಭರವಸೆ ನೀಡಿದರು.  ಬಿ.ಆರ್.ಗೌಡೂರು, ನಾಗರಾಜ, ಹನುಮಂತರಾಜ, ತಾಲ್ಲೂಕು ಮಟ್ಟದ ವಿವಿಧ ಅಧಿಕಾರಿಗಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.