ADVERTISEMENT

ಪವರ್ ಗ್ಲೈಡಿಂಗ್: ಸಚಿವಗೆ ಗಾಯ

​ಪ್ರಜಾವಾಣಿ ವಾರ್ತೆ
Published 15 ಜನವರಿ 2012, 19:30 IST
Last Updated 15 ಜನವರಿ 2012, 19:30 IST

ಮಂಗಳೂರು: ಇಲ್ಲಿನ ತಣ್ಣೀರುಬಾವಿ ಕಡಲ ತೀರದಲ್ಲಿ ಭಾನುವಾರ ಸಂಜೆ ಪವರ್ ಗ್ಲೈಡರ್‌ನಲ್ಲಿ ಹಾರಾಡುವ ಯತ್ನದಲ್ಲಿದ್ದ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಪಾಲೆಮಾರ್ ಅವರಿಗೆ ಗ್ಲೈಡರ್‌ನ ಸರಳೊಂದು ಎದೆ ಮತ್ತು ಭುಜಕ್ಕೆ ತಾಗಿ ಸಣ್ಣಪುಟ್ಟ ಗಾಯಗಳಾಗಿವೆ.

ಪವರ್ ಗ್ಲೈಡರ್‌ನಲ್ಲಿ  ಮತ್ತೊಬ್ಬರ ಸಹಾಯದೊಂದಿಗೆ ಆಗಸಕ್ಕೆ ಹಾರುವ ತಯಾರಿಯಲ್ಲಿದ್ದಾಗ ಸರಳು ಒಮ್ಮೆಲೆ ಹಿಂದಕ್ಕೆ ಚಲಿಸಿ ಸಚಿವರ ಎದೆ ಮತ್ತು ಭುಜಕ್ಕೆ ತಾಗಿ ಗಾಯವಾಗಿ ರಕ್ತ ಸುರಿಯಿತು. ತಕ್ಷಣ ಪ್ರಥಮ ಚಿಕಿತ್ಸೆ ನೀಡಲಾಯಿತು. ನಂತರ ಹಾರಾಟದ ಯತ್ನ ಕೈಬಿಟ್ಟ ಸಚಿವರು ನಿರ್ಗಮಿಸಿದರು.

`ನನಗೆ ಏನೂ ಆಗಿಲ್ಲ, ತಣ್ಣೀರುಬಾವಿಯಿಂದ ಬಂದು ನಾನೀಗ ಬೇರೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೇನೆ. ಇದೊಂದು ಸಣ್ಣ ಘಟನೆ ಮಾತ್ರ~ ಎಂದು ಪಾಲೆಮಾರ್ `ಪ್ರಜಾವಾಣಿ~ಗೆ ದೂರವಾಣಿಯಲ್ಲಿ ತಿಳಿಸಿದರು.

ರಾಷ್ಟ್ರೀಯ ಯುವಜನೋತ್ಸವ ನಿಮಿತ್ತ ನಡೆಯುತ್ತಿರುವ ಸಾಹಸ ಕ್ರೀಡೆಗಳಲ್ಲಿ ಸಚಿವರು ಸಕ್ರಿಯವಾಗಿ ಪಾಲ್ಗೊಂಡಿದ್ದರು. ಶುಕ್ರವಾರ ಜೆಟ್ ಸ್ಕೀಯಿಂಗ್‌ನಲ್ಲಿ ಸಮುದ್ರದಲ್ಲಿ ಸವಾರಿ ಮಾಡಿದ್ದ ಅವರು, ಗೋಡೆ ಏರುವ ಸಾಹಸವನ್ನೂ ನಡೆಸಿದ್ದರು. ಆದರೆ ತಣ್ಣೀರುಬಾವಿ ಕಡಲ ತೀರದಲ್ಲಿ ಆಗಸಕ್ಕೆ ಏರಿ ಒಂದಿಷ್ಟು ಸಂಚರಿಸುವ ಅವರ ಯತ್ನ ವಿಫಲವಾಯಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.