ಮಂಗಳೂರು: `ಫಸ್ಟ್ ರ‌್ಯಾಂಕ್ ಬಂದಿದ್ದು ಗೊತ್ತಾಗುತ್ತಿದ್ದಂತೆ ಅಚ್ಚರಿಯಾಯಿತು. ಇಪ್ಪತ್ತರೊಳಗಿನ ರ‌್ಯಾಂಕ್ ನಿರೀಕ್ಷಿಸಿದ್ದೆ~!
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿವಿ ವೈದ್ಯಕೀಯ-ದಂತ ವೈದ್ಯ ಸ್ನಾತಕೋತ್ತರ ಪದವಿ ಪ್ರವೇಶ ಪರೀಕ್ಷೆ (ಪಿಜಿಇಟಿ)ಯಲ್ಲಿ ಪ್ರಥಮ ರ‌್ಯಾಂಕ್ ಪಡೆದ ಡಾ. ಕೆ.ಎಂ.ಆದರ್ಶ್ ಅವರ ತಕ್ಷಣದ ಪ್ರತಿಕ್ರಿಯೆ ಇದು.
ಜನವರಿಯಲ್ಲಿ ನಡೆದ ಪ್ರವೇಶ ಪರೀಕ್ಷೆಗೆ ವೈದ್ಯಕೀಯ ವಿಭಾಗದಲ್ಲಿ 8,824, ದಂತವೈದ್ಯ ವಿಭಾಗದಲ್ಲಿ 2,102 ಮಂದಿ ಪರೀಕ್ಷೆ ಬರೆದಿದ್ದರು. ಒಟ್ಟು 199ರಲ್ಲಿ 183 ಅಂಕ ಪಡೆದ ಆದರ್ಶ್ ರಾಜ್ಯಕ್ಕೆ ಮೊದಲಿಗರಾದರು. (200 ಅಂಕಗಳಿಗೆ ಪರೀಕ್ಷೆ ನಡೆದಿದ್ದರೂ 1 ಪ್ರಶ್ನೆಯನ್ನು ವಿವಿ ರದ್ದುಪಡಿಸಿತು). ಫಲಿತಾಂಶ ಬುಧವಾರ ಪ್ರಕಟವಾದಾಗ ಆದರ್ಶ್, ಅಣ್ಣ ಡಾ. ಅಕ್ಷಯ್ ಜತೆ ಮಂಗಳೂರಿನಲ್ಲಿದ್ದರು.
ಖಾಸಗಿ ವಲಯದಲ್ಲಿ `ಕೋಟ್ಯಂತರ ಬೆಲೆ ಇರುವ~ ವೈದ್ಯಕೀಯ ಪಿಜಿ ಪ್ರವೇಶ ಸರ್ಕಾರಿ ಕೋಟಾದಡಿ ಲಭಿಸಿರುವುದರಿಂದ `ಜಾಕ್‌ಪಾಟ್~ ಹೊಡೆದಷ್ಟು ಖುಷಿಯಲ್ಲಿದ್ದ ಆದರ್ಶ್, ಗುರುವಾರ `ಪ್ರಜಾವಾಣಿ~ ಜತೆ ಸಂತಸ ಹಂಚಿಕೊಂಡರು.
`ಮೊದಲೆಲ್ಲ 200 ಅಂಕಗಳಲ್ಲಿ 188ರ ಆಸುಪಾಸು ಅಂಕ ಪಡೆದವರು ಮೊದಲ ಹತ್ತರೊಳಗೆ ರ‌್ಯಾಂಕ್ ಪಡೆಯುತ್ತಿದ್ದರು. 183 ಅಂಕ ಬರುತ್ತದೆಂದು ತಿಳಿದಾಗ 20ರೊಳಗಿನ ರ‌್ಯಾಂಕ್ ನಿರೀಕ್ಷಿಸಿದ್ದೆ. `ನಂಬರ್ 1~ ಎಂದಾಗ ನಂಬಲಿಕ್ಕೆ ಆಗಲಿಲ್ಲ~ ಎಂದರು.
ಆದರ್ಶ್ ಹುಟ್ಟೂರು ಉತ್ತರ ಕನ್ನಡದ ದಾಂಡೇಲಿ. ತಂದೆ ಎಂ.ಜಿ.ಹೆಗಡೆ ನಿವೃತ್ತ ಮುಖ್ಯ ಶಿಕ್ಷಕ. ತಾಯಿ ಜಯಲಕ್ಷ್ಮಿ ಶುಶ್ರೂಷಕಿ. ಧಾರವಾಡ ಜೆಎಸ್‌ಎಸ್ ಕಾಲೇಜಿನಲ್ಲಿ ಪಿಯು ಓದಿರುವ ಆದರ್ಶ ವೈದ್ಯನಾಗುವ ಕನಸನ್ನು ಬಾಲ್ಯದಲ್ಲೇ ಕಂಡಿದ್ದರು. ಮಂಗಳೂರಿನ ಯೇನಪೋಯ ವೈದ್ಯಕೀಯ ಕಾಲೇಜಿನ ಸಮುದಾಯ ವೈದ್ಯಕೀಯ ವಿಭಾಗದಲ್ಲಿರುವ ಅಣ್ಣನ ಹಾದಿಯನ್ನೇ ತುಳಿದ ಆದರ್ಶ್, ಸಿಇಟಿಯಲ್ಲಿ 344ನೇ ರ‌್ಯಾಂಕ್ ಪಡೆದು, 2011ರಲ್ಲಿ ಬಳ್ಳಾರಿ ವಿಮ್ಸನಲ್ಲಿ ಎಂಬಿಬಿಎಸ್ ಮುಗಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.