ADVERTISEMENT

ಪುರಸಭೆ ಆಸ್ತಿ ಗುರುತಿಸಲು ತಾಕೀತು

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2011, 19:30 IST
Last Updated 19 ಅಕ್ಟೋಬರ್ 2011, 19:30 IST

ದೇವನಹಳ್ಳಿ: ಐದು ವರ್ಷಗಳಲ್ಲಿ ಅಭಿವೃದ್ಧಿಯಾಗುತ್ತಿರುವ ನೂತನ ಬಡಾವಣೆಗಳು ಸೇರಿದಂತೆ ಪುರಸಭೆ ವ್ಯಾಪ್ತಿಯಲ್ಲಿ ಬರುವ ಒಟ್ಟು 23 ವಾರ್ಡ್‌ಗಳಲ್ಲಿನ ಪಾರ್ಕ್, ನಿವೇಶನ ಸೇರಿದಂತೆ ಇತರೆ ಸ್ವತ್ತುಗಳನ್ನು ಗುರುತಿಸಿ ತಂತಿ ಬೇಲಿ ಹಾಕಿ ನಾಮಫಲಕ ತೋರಿಸುವಂತೆ ಜಿಲ್ಲಾ ಯೋಜನಾಧಿಕಾರಿ ಯು.ಎಸ್.ಅಶ್ವತ್ಥ್‌ನಾರಾಯಣಗೌಡ ಮುಖ್ಯಾಧಿಕಾರಿಗೆ ತಾಕೀತು ಮಾಡಿದರು.

ಪಟ್ಟಣದ ಪುರಸಭಾ ಕಚೇರಿಗೆ ಬುಧವಾರ ಭೇಟಿ ನೀಡಿದ ಅವರು, ಹಲವು ಕಡತಗಳನ್ನು ಪರಿಶೀಲಿಸಿ ಅಧಿಕಾರಿಗಳ ಬೇಜವಾಬ್ದಾರಿ ನಿರ್ವಹಣೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

`ಪುರಸಭೆ ಆಸ್ತಿ ಕೋಟ್ಯಂತರ ಬೆಲೆಯುಳ್ಳದ್ದು. ಪಟ್ಟಣದ ಅನೇಕ ಕಡೆ ಅತಿಕ್ರಮಣ ಮತ್ತು ಒತ್ತುವರಿ ಅಲ್ಲದೆ ನಿಯಮ ಮೀರಿ ಖಾತೆ ಮಾಡಿಕೊಟ್ಟಿರುವ ಬಗ್ಗೆ  ಸಾರ್ವಜನಿಕರಿಂದ ದೂರುಗಳು ಬರುತ್ತಲೇ ಇವೆ. ಕಾನೂನು ನಿಯಮದಡಿ ಕರ್ತವ್ಯನಿರ್ವಹಿಸಿ ಇಲ್ಲದಿದ್ದಲ್ಲಿ ಹುದ್ದೆ ಕಳೆದುಕೊಳ್ಳಬೇಕಾದೀತು~ ಎಂದರು.

ADVERTISEMENT

ಮುರಳಿ ಕೃಷ್ಣ ಲೇಔಟ್‌ನಲ್ಲಿ ಆರು ಖಾತೆಗಳಾಗಿ ಬದಲಾಯಿಸಿ ಮಾರಾಟ ಮಾಡಲಾಗಿದೆ. ಪುರಸಭೆಯಿಂದಲೇ ಖಾತೆ ಮಾಡಿ ಕೊಡಲಾಗಿದೆ. ಇದರ ಬಗ್ಗೆ ಕೇವಲ ನಿವೇಶನ ಎಂದು ದಾಖಲೆ ಮಾತ್ರ ಇದೆ. ಆದರೆ ಪುರಸಭೆ ಅಧಿಕಾರಿಗಳು ಇದೂವರೆಗೂ ಬಡಾವಣೆಯ ನಕಾಶೆ ನೀಡಿಲ್ಲ.  ಈ ಬಗ್ಗೆ ಸ್ಥಳ ಪರಿಶೀಲಿಸಿ ಎಂಬ ಸ್ಥಾಯಿ ಸಿಮಿತಿ ಅಧ್ಯಕ್ಷ ಹನುಮಂತಪ್ಪ ಮನವಿ ಮೇರೆಗೆ ಸ್ಥಳ ಪರಿಶೀಲನೆ ನಡೆಸಿದ ಯೋಜನಾಧಿಕಾರಿ, ಆಸ್ತಿ ಅತಿಕ್ರಮಣ ಗಂಭೀರ ಪ್ರಕರಣ. ಆದರೆ ಐದಾರು ದಿನಗಳಲ್ಲಿ ಇಲಾಖೆಗೆ ಸಂಬಂಧಪಟ್ಟ ಎಲ್ಲಾ ರೀತಿಯ ಕಡತಗಳನ್ನು ಸಮಗ್ರವಾಗಿ ಪರಿಶೀಲಿಸಲು ತಂಡ ರಚಿಸಲಾಗುವುದು. ಯಾವುದೇ ಖಾತೆ ಮಾಡಿಸಿಕೊಂಡರೂ  ಅದು ಊರ್ಜಿತವಲ್ಲ, ಕಾನೂನು ಉಲ್ಲಂಘನೆಗೆ ಅವಕಾಶವಿಲ್ಲ. ಇಂಥ ಪ್ರಕರಣಗಳಲ್ಲಿ ಅಧಿಕಾರಿಗಳು ತಪ್ಪೆಸಗಿದ್ದು ಕಂಡುಬಂದಲ್ಲಿ ಅಮಾನತುಗೊಳಿಸಲು ಹಿರಿಯ ಅಧಿಕಾರಿಗಳಿಗೆ ಶಿಫಾರಸು ಮಾಡಲಾಗುವುದೆಂದರು.

ಕಳಪೆ ಕಾಮಗಾರಿ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕಾಮಗಾರಿ ಗುತ್ತಿಗೆ ಪಡೆದವರು ಕರಾರು ಪತ್ರ ಮತ್ತು ಇ.ಎಂ.ಡಿ. ಹಾಗೂ ಭದ್ರತ ಠೇವಣಿ ನೀಡುವುದು ಕಡ್ಡಾಯ. ಆದರೆ ಕಳಪೆ ಕಾಮಗಾರಿ ಕಂಡುಬಂದಲ್ಲಿ ಕಾಮಗಾರಿ ನಡೆದು ಎರಡು ವರ್ಷದವರೆಗೂ ಸೂಚಿಸಿದ ನಿಯಮದಂತೆ ಅವರೇ ಜವಾಬ್ದಾರರು. ಇಲ್ಲದಿದ್ದಲ್ಲಿ ನಿಯಮದಂತೆ ಎಲ್ಲಾ ರೀತಿಯಿಂದ ಠೇವಣಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು. ಇದಕ್ಕೂ ಮೀರಿದ್ದಲ್ಲಿ ಸಂಬಂಧಪಟ್ಟ ಎಂಜಿನಿಯರ್ ಮತ್ತು ಮುಖ್ಯಾಧಿಕಾರಿಗಳೇ ಹೊಣೆಗಾರರು ಎಂದು ತಿಳಿಸಿದರು. ಪುರಸಭೆ ಸದಸ್ಯ ನಾರಾಯಣ ಸ್ವಾಮಿ, ಕಸ್ತೂರಿ ಮಂಜುನಾಥ್, ಮಾಜಿ ಸದಸ್ಯ ಮಾರಪ್ಪ ಹಾಗೂ ಅಧಿಕಾರಿಗಳು ಪರಿಶೀಲನೆ ವೇಳೆ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.