ADVERTISEMENT

ಪುರಸಭೆ ಸಾಮಾನ್ಯ ಸಭೆಗೆ ಮುತ್ತಿಗೆ

​ಪ್ರಜಾವಾಣಿ ವಾರ್ತೆ
Published 24 ಜನವರಿ 2011, 19:30 IST
Last Updated 24 ಜನವರಿ 2011, 19:30 IST

ಲಿಂಗಸುಗೂರ: ಸ್ಥಳೀಯ ಪುರಸಭೆಯಲ್ಲಿ ದಿನಗೂಲಿ ಪೌರ ಕಾರ್ಮಿಕರು ಅಗತ್ಯ ಸೌಲಭ್ಯಗಳಿಲ್ಲದೆ ಪರದಾಡುತ್ತಿದ್ದಾರೆ.ನಾಲ್ಕು ತಿಂಗಳಿಂದ ವೇತನ ನೀಡದೆ ಆಡಳಿತ ಮಂಡಳಿ ಸತಾಯಿಸುತ್ತ ಬಂದಿದೆ.ಎಂದು ಆಕ್ಷೇಪಿಸಿ ಪೌರ ಕಾರ್ಮಿಕರು ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಸೋಮವಾರ ಪುರಸಭೆಯಲ್ಲಿ ನಡೆಯುತ್ತಿದ್ದ ಸಾಮಾನ್ಯ ಸಭೆಗೆ ಮುತ್ತಿಗೆ ಹಾಕಿದರು. ಬಳಿಕ ಪ್ರತಿಭಟನೆ ನಡೆಸಿದರು.

ಪೌರ ಕಾರ್ಮಿಕರನ್ನು ಜೀತದಾಳುಗಳಂತೆ ದುಡಿಸಿಕೊಳ್ಳುತ್ತಾರೆ. ವೇತನ, ಅಗತ್ಯ ಸೌಲಭ್ಯ ನೀಡುವಂತೆ ಕೇಳಿದರೆ ಇಲ್ಲದ ನೆಪ ಹೇಳಿಕೊಂಡು ಗೋಳು ಹೊಯ್ದುಕೊಳ್ಳುತ್ತಾರೆ.ಸಾಕಷ್ಟು ಬಾರಿ ಅಧಿಕಾರಿ ಮತ್ತು ಆಡಳಿತ ಮಂಡಳಿಗೆ ಮನವಿ ಮಾಡಿದರು ಪ್ರಯೋಜನವಾಗಿಲ್ಲ ಎಂದು ತಿಳಿಸಿದ ಪ್ರತಿಭಟನಾಕಾರರು ವೇತನ ನೀಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದರು.

ಸಭೆಯಲ್ಲಿದ್ದ ಶಾಸಕ ಮಾನಪ್ಪ ವಜ್ಜಲ ಪೌರ ಕಾರ್ಮಿಕರ  ಸಂಕಷ್ಟಗಳನ್ನು ಆಲಿಸಿದರು.ಸಾಮಾನ್ಯ ಸಭೆಯಲ್ಲಿ ಆಡಳಿತ ಮಂಡಳಿಗೆ ಮತ್ತು ಅಧಿಕಾರಿಗಳಿಗೆ ಪರ್ಯಾಯ ವ್ಯವಸ್ಥೆ ಮೂಲಕ ವೇತನ ನೀಡುವಂತೆ ಶಾಸಕರು ತಾಕೀತು ಮಾಡಿದರು.

ಒಂದು ಗಂಟೆಗೂ ಹೆಚ್ಚು ಕಾಲ ವಾಗ್ವಾದ ನಡೆಸಿದ ಕಾರ್ಮಿಕ ಮುಖಂಡರು ಶಾಸಕರ ಭರವಸೆ ಮೇರೆಗೆ ಪ್ರತಿಭಟನೆ ಹಿಂದಕ್ಕೆ ಪಡೆದರು. ಪ್ರತಿಭಟನೆ ನೇತೃತ್ವವನ್ನು ಲಿಂಗಪ್ಪ ಪರಂಗಿ, ಕುಪ್ಪಣ್ಣ ಹೊಸಮನಿ, ಶಿವಪ್ಪ ಭಟ್ಟರ್, ನಾಗರಾಜ ತಿಪ್ಪಣ್ಣ, ರೇಣುಕಾ, ಸರಸ್ವತಿ, ದ್ಯಾಮವ್ವ, ಮರಿಯಮ್ಮ, ಯಲ್ಲಮ್ಮ, ಲಕ್ಷ್ಮವ್ವ, ಭೋಗವ್ವ ಇನ್ನಿತರರು ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.