ADVERTISEMENT

ಪುಷ್ಪಾಗೆ ಎಂಜಿನಿಯರಿಂಗ್ ಸೀಟು

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2012, 19:30 IST
Last Updated 13 ಆಗಸ್ಟ್ 2012, 19:30 IST

ಪ್ರಜಾವಾಣಿ ಫಲಶ್ರುತಿ

ಹುಬ್ಬಳ್ಳಿ: ಜೇವರ್ಗಿಯ ವಿಶ್ವಜ್ಯೋತಿ ಪಂಚಾಕ್ಷರ ನಾಟ್ಯ ಸಂಘದ ಮಾಲೀಕ ಹಾಗೂ ನಟರಾದ ಜೇವರ್ಗಿ ರಾಜಣ್ಣ ಅವರ ಪುತ್ರಿ ಪುಷ್ಪಾ ಜೇವರ್ಗಿ ಧಾರವಾಡದ ಎಸ್‌ಡಿಎಂ ಎಂಜಿನಿಯರಿಂಗ್ ಕಾಲೇಜಿನಲ್ಲಿ ಶನಿವಾರ ಎಲೆಕ್ಟ್ರಾನಿಕ್ ಆ್ಯಂಡ್ ಕಮ್ಯುನಿಕೇಶನ್ ಕೋರ್ಸ್‌ಗೆ ಪ್ರವೇಶ ಪಡೆದುಕೊಂಡಿದ್ದಾರೆ.


`ತಾಂತ್ರಿಕ ಅಡಚಣೆ; ವೃತ್ತಿ ಶಿಕ್ಷಣ ಸೀಟು ವಂಚಿತೆ ಪುಷ್ಪಾ~ ಎಂಬ ವಿಶೇಷ ವರದಿಯನ್ನು `ಪ್ರಜಾವಾಣಿ~ ಜುಲೈ 25ರಂದು ಪ್ರಕಟಿಸಿತ್ತು.

ಶಾಸಕ ಗೂಳಿಹಟ್ಟಿ ಶೇಖರ್ ವಿಧಾನಸಭೆಯ ಅಧಿವೇಶನದಲ್ಲಿ ಈ ಕುರಿತು ವಿಷಯ ಪ್ರಸ್ತಾಪಿಸಿದ್ದರು. ಮಾನವೀಯ ಆಧಾರದ ಮೇಲೆ ಪುಷ್ಪಾಗೆ ಸೀಟು ಕೊಡುವುದಾಗಿ ಸಚಿವ ಸಿ.ಟಿ.ರವಿ ಕೂಡ ಭರವಸೆ ನೀಡಿದ್ದರು. ನಂತರ ಅವರು ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಸಿದ್ದಯ್ಯ ಅವರಿಗೆ ಸೂಚಿಸಿ, ಸೂಕ್ತ ಸ್ಥಳದಲ್ಲಿ ಸೀಟು ಕೊಡಬೇಕೆಂದು ಆದೇಶಿಸಿದ್ದರು. ಇದರ ಪರಿಣಾಮ ಪುಷ್ಪಾ ಪ್ರವೇಶ ಪಡೆದರು.

`ಕೂಲಿಯಿಂದ ಶಾಲೆಗೆ~ ಯೋಜನೆಯಡಿ ಗುಲ್ಬರ್ಗ ಜಿಲ್ಲೆಯ ಜೇವರ್ಗಿಯಲ್ಲಿ ಪುಷ್ಪಾ ನೇರವಾಗಿ ಏಳನೇ ತರಗತಿಗೆ ಪ್ರವೇಶ ಪಡೆದಿದ್ದಳು. ನಂತರ ಎಸ್‌ಎಸ್‌ಎಲ್‌ಸಿಯಲ್ಲಿ ಶೇ 78.88 ಹಾಗೂ ಪಿಯುಸಿಯಲ್ಲಿ ಶೇ 82 ಅಂಕ ಪಡೆದು ಪಾಸಾದಳು. ಆದರೆ ನಿರಂತರವಾಗಿ 7 ವರ್ಷಗಳವರೆಗೆ ಕಲಿತಿಲ್ಲ ಎನ್ನುವ ಕಾರಣಕ್ಕೆ ದಾಖಲೆ ಪರಿಶೀಲನೆ ಹಂತದಲ್ಲಿ ಎಂಜಿನಿಯರಿಂಗ್ ಸೀಟು ಸಿಕ್ಕಿರಲಿಲ್ಲ.
 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.