ADVERTISEMENT

ಪೆಟ್ರೋಲ್ ದರ ಏರಿಕೆ: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 24 ಮೇ 2012, 19:30 IST
Last Updated 24 ಮೇ 2012, 19:30 IST

ಶ್ರೀರಂಗಪಟ್ಟಣ:  ಪೆಟ್ರೋಲ್ ದರ ಏರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿ ಕನ್ನಡ ಸೇನೆ ಹಾಗೂ ಸಾರ್ವಜನಿಕ ಹಿತರಕ್ಷಣಾ ಸಮಿತಿ ಕಾರ್ಯಕರ್ತರು ಪಟ್ಟಣದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ವಾಹನಗಳನ್ನು ತಡೆದ ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಮುಖ್ಯ ಬೀದಿಯಲ್ಲಿ ಮೆರವಣಿಗೆ ನಡೆಸಿದರಲ್ಲದೆ, ತಹಶೀಲ್ದಾರ್ ಕಚೇರಿ ಎದುರು ಕೆಲಕಾಲ ಧರಣಿ ನಡೆಸಿದರು. ಕೇಂದ್ರ ಸರ್ಕಾರ ಮೇಲಿಂದ ಮೇಲೆ ತೈಲ ಬೆಲೆ ಏರಿಸುತ್ತಿದೆ. ಇದರಿಂದ ಬಡ ಜನರಿಗೆ ಹೊರೆಯಾಗುತ್ತಿದೆ. ರೂಪಾಯಿ ಅಪಮೌಲ್ಯದ ನೆಪದಲ್ಲಿ ಬೆಲೆ ಏರಿಕೆ ಸಮರ್ಥನೀಯ ಅಲ್ಲ ಎಂದು ಕನ್ನಡ ಸೇನೆ ತಾಲ್ಲೂಕು ಅಧ್ಯಕ್ಷ ಶಿವರಾಂ ಹೇಳಿದರು.
 
ಸಾರ್ವಜನಿಕ ಹಿತರಕ್ಷಣಾ ಸಮಿತಿ ತಾಲ್ಲೂಕು ಅಧ್ಯಕ್ಷ ಡಿ.ಎಂ.ರವಿ ಮಾತನಾಡಿ, ಕೇಂದ್ರ ಸರ್ಕಾರಿ ಸ್ವಾಮ್ಯದ ತೈಲ ಕಂಪೆನಿಗಳು ದಿಢೀರ್ ದರ ಏರಿಕೆ ಮಾಡುತ್ತಿದ್ದು, ಸಾಮಾನ್ಯ ಜನರನ್ನು ಶೋಷಿಸುತ್ತಿವೆ. ಇದರ ಪರಿಣಾಮ ಅಗತ್ಯ ವಸ್ತುಗಳ ಬೆಲೆಯಲ್ಲಿ ಏರಿಕೆಯಾಗಲಿದೆ. ಅಂತಿಮವಾಗಿ ಬಡ ಜನರಿಗೆ ಬೆಲೆ ಏರಿಕೆಯ ಬಿಸಿ ತಟ್ಟಲಿದೆ. ತೈಲ ಬೆಲೆ ಏರಿಕೆಯನ್ನು ತಕ್ಷಣ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ಗಂಜಾಂ ಪುಟ್ಟರಾಮು, ಪಾನಿಪೂರಿ ರವಿ, ಹೊನ್ನರಾಜು, ನಾಗರಾಜು, ಕೃಷ್ಣಸ್ವಾಮಿ, ಮಹೇಶ್ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ತಹಶೀಲ್ದಾರ್ ಅರುಳ್ ಕುಮಾರ್‌ಗೆ ಮನವಿ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.