ಚಿಕ್ಕಮಗಳೂರು: ನಾಗರಿಕರ ರಕ್ಷಣೆಗಾಗಿ ಅಹರ್ನಿಶಿ ಸೇವೆ ಸಲ್ಲಿಸುತ್ತಿರುವ ಪೊಲೀಸ್ ಇಲಾಖೆಯ ಕರ್ತವ್ಯ ಶ್ಲಾಘನೀಯ ಎಂದು ಜಿಲ್ಲಾಧಿಕಾರಿ ಡಿ.ಕೆ.ರಂಗಸ್ವಾಮಿ ಪ್ರಶಂಸಿಸಿದರು.ರಾಜ್ಯ ಪೊಲೀಸ್ ಧ್ವಜ ದಿನಾಚರಣೆ ಅಂಗವಾಗಿ ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಸೋಮವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪೊಲೀಸರು ಸಮಯದ ಮಿತಿಯಿಲ್ಲದೇ ಸಮಾಜದಲ್ಲಿ ಶಾಂತಿ-ನೆಮ್ಮದಿಗಾಗಿ ದುಡಿಯುತ್ತಿದ್ದಾರೆ. ಇದರ ಬಗ್ಗೆ ಎಲ್ಲರೂ ಹೆಮ್ಮೆ ಪಡಬೇಕಾಗಿದೆ ಎಂದರು.ನಿವೃತ್ತ ಪಿಎಸ್‌ಐ ಎಂ.ಎಸ್.ಬಸವಯ್ಯ ಮಾತನಾಡಿ, ಇಲಾಖೆಯಲ್ಲಿ ಸಲ್ಲಿಸಿದ ಸುದೀರ್ಘ ಸೇವೆಯು ತಮಗೆ ತೃಪ್ತಿ ತಂದಿದೆ. ಪ್ರತಿಯೊಬ್ಬರು ಆತ್ಮತೃಪ್ತಿಯಾಗುವಂತೆ ಕೆಲಸ ಮಾಡಬೇಕು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಶಶಿಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಪೊಲೀಸ್ ಕಲ್ಯಾಣ ನಿಧಿಯಿಂದ ಇಲಾಖೆ ಸಿಬ್ಬಂದಿಯ ಮಕ್ಕಳ ವಿದ್ಯಾಭ್ಯಾಸ ಸೇರಿದಂತೆ ವಿವಿಧ ಕಲ್ಯಾಣ ಕಾರ್ಯಕ್ರಮಗಳಿಗೆ ಹಣ ಬಳಸಿಕೊಳ್ಳಲಾಗುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ಕಳೆದ ಸಾಲಿನಲ್ಲಿ ನಿವೃತ್ತಿಯಾದ ಇಲಾಖೆಯ ಅಧಿಕಾರಿ, ಸಿಬ್ಬಂದಿಯನ್ನು ಸನ್ಮಾನಿಸಲಾಯಿತು. ಕವಾಯತು ತುಕಡಿಗಳಿಂದ ಪಥ ಸಂಚಲನ ನಡೆಯಿತು. ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಿತ್ರ ಹೆರಾಜೆ, ಡಿವೈಎಸ್‌ಪಿ ವೇದಮೂರ್ತಿ ಇದ್ದರು.
ಇದಕ್ಕೂ ಮೊದಲು ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಕವಾಯತು ತಂಡಗಳ ಪರಿವೀಕ್ಷಣೆ ನಡೆಸಿದರು. ಸಿವಿಲ್ ಮತ್ತು ಜಿಲ್ಲಾ ಶಸಸ್ತ್ರ ಪಡೆ ಪೊಲೀಸ್ ತುಕಡಿಗಳಿಂದ ಪಥ ಸಂಚಲನ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.