ADVERTISEMENT

ಪೊಲೀಸ್ ತರಬೇತಿ ಕಾಲೇಜಿಗೆ ಜಮೀನು: ಜಿಲ್ಲಾಧಿಕಾರಿ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2012, 19:30 IST
Last Updated 21 ಅಕ್ಟೋಬರ್ 2012, 19:30 IST

ಹಾಸನ: `ಜಿಲ್ಲೆಯಲ್ಲಿ ಪೊಲೀಸ್ ತರಬೇತಿ ಕಾಲೇಜು ಆರಂಭಕ್ಕೆ 50 ಎಕರೆ ಜಮೀನು ಮಂಜೂರು ಮಾಡಲಾಗಿದ್ದು, ಜೈಲು ನಿರ್ಮಾಣಕ್ಕೆ ಅಗತ್ಯವಾದ ಭೂಮಿಯನ್ನು ವಾರದೊಳಗೆ ನೀಡಲಾಗುವುದು~ ಎಂದು ಜಿಲ್ಲಾಧಿಕಾರಿ ಕೆ.ಪಿ. ಮೋಹನರಾಜ್ ಹೇಳಿದರು.

ಪೊಲೀಸ್ ಹುತಾತ್ಮ ದಿನಾಚರಣೆ ಅಂಗವಾಗಿ ಇಲ್ಲಿನ ಪೊಲೀಸ್ ಕ್ವಾರ್ಟರ್ಸ್‌ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪೊಲೀಸರು ವರ್ಷಪೂರ್ತಿ ದಿನದ 24 ಗಂಟೆಯೂ ಕಾರ್ಯ ನಿರ್ವಹಿಸುವ ಹೊಣೆ ಹೊತ್ತಿದ್ದಾರೆ. ಅವರು ಒಂದು ದಿನ ತಮ್ಮ ಕೆಲಸ ಮಾಡದಿದ್ದರೆ ಸಮಾಜದಲ್ಲಿ ಅರಾಜಕತೆ ಸೃಷ್ಟಿಯಾಗುತ್ತದೆ. ಇಂಥ ಸೇವೆ ಮಾಡುವ ಪೊಲೀಸರನ್ನು ಸಮಾಜ ಸರಿಯಾಗಿ ಗುರುತಿಸಿಲ್ಲ. ಪೊಲೀಸರ ಬೇಡಿಕೆಗಳನ್ನು ಪೂರೈಸಲು ನಾನು ಸಹಾಯ ಮಾಡುತ್ತಾ ಬಂದಿದ್ದೇನೆ. ಮುಂದಿನ ದಿನಗಳಲ್ಲೂ ಅದನ್ನು ಮುಂದುವರಿಸುತ್ತೇನೆ. ಜಿಲ್ಲೆಯಲ್ಲಿ ಪೊಲೀಸರ ವಸತಿ ಗೃಹ ನಿರ್ಮಾಣಕ್ಕೆ ಜಾಗ ಮಂಜೂರು ಮಾಡುವಂತೆ ಪೊಲೀಸ್ ವರಿಷ್ಠಾಧಿಕಾರಿ ಮನವಿ ಸಲ್ಲಿಸಿದ್ದಾರೆ.  ತಿಂಗಳಲ್ಲಿ ಜಾಗ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶ ಕೆ.ಬಿ. ಚಂಗಪ್ಪ ಮಾತನಾಡಿ, `ಪೊಲೀಸರ ಕೆಲಸ ಅತ್ಯಂತ ಕ್ಲಿಷ್ಟಕರ. ಇದನ್ನು ಅರಿತು ಸಹ ಸಣ್ಣ ತಪ್ಪನ್ನು ಎತ್ತಿ ತೋರಿಸುವ ಕೆಲಸವನ್ನು ಸಮಾಜ ಮಾಡುತ್ತಿದೆ. ಇದರ ಬದಲು ಸಮಾಜ ಅವರ ಕೆಲಸಕ್ಕೆ ಸಹಕಾರ ನೀಡಬೇಕು~ ಎಂದರು.

ಜಿಲ್ಲಾಧಿಕಾರಿ ಕೆ.ಪಿ. ಮೋಹನರಾಜ್, ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಸಿಂಗ್ ಮತ್ತಿತರ ಗಣ್ಯರು ಹುತಾತ್ಮರ ಸ್ಮಾರಕಕ್ಕೆ ಪುಷ್ಪಗುಚ್ಛ ಅರ್ಪಿಸಿ ಗೌರವ ಸಲ್ಲಿಸಿದರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪ್ರಭಾಕರ್ ವಂದಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.