ADVERTISEMENT

ಪ್ರಖರ ಬಿಸಿಲು- ತತ್ತರಿಸುತ್ತಿರುವ ಜನತೆ

​ಪ್ರಜಾವಾಣಿ ವಾರ್ತೆ
Published 22 ಮೇ 2012, 19:20 IST
Last Updated 22 ಮೇ 2012, 19:20 IST

ಬೀದರ್:  ಜಿಲ್ಲೆಯಲ್ಲಿ ಒಂದು ವಾರದಿಂದ ಉಷ್ಣಾಂಶ ತೀವ್ರಗೊಂಡಿದ್ದು, 42 ಡಿಗ್ರಿ ಸೆಲ್ಸಿಯಸ್ ದಾಖಲಾಗುವುದರೊಂದಿಗೆ ಜನತೆಗೆ ಬಿಸಿಲಿನ ತೀವ್ರತೆಯ ಅನುಭವ ನೀಡುತ್ತಿದೆ. ಬಿಸಿಲ ಝಳಕ್ಕೆ ಜನತೆ ಹೈರಾಣಾಗಿದ್ದು, ಬಿಸಿ ಗಾಳಿಯಿಂದಾಗಿ ತತ್ತರಿಸುತ್ತಿದ್ದಾರೆ.

 ಹವಾಮಾನ ಇಲಾಖೆಯ ವೆಬ್‌ಸೈಟ್‌ನ ಅನುಸಾರ, ಮಂಗಳವಾರ ಜಿಲ್ಲೆಯಲ್ಲಿ ಗರಿಷ್ಠ ಉಷ್ಣಾಂಶ ಶೇ 42ರಷ್ಟು ದಾಖಲಾಗಿದ್ದು, ಮುಂದಿನ ಒಂದು ವಾರದಲ್ಲಿ ಗರಿಷ್ಠ ಉಷ್ಣಾಂಶ 40-41 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿ ಇರುವ ಸೂಚನೆಯಿದೆ.

ಜೂನ್ ಹತ್ತಿರವಾಗುತ್ತಿದ್ದಂತೆ ಸಾಮಾನ್ಯವಾಗಿ ಬಿಸಿಲಿನ ಪ್ರಖರತೆ ಕಡಿಮೆ ಆಗುತ್ತಿದ್ದುದನ್ನು ಗಮನಿಸಿದ್ದ ಜನತೆಗೆ ಈ ಬಾರಿ ಜೂನ್ ಸಮೀಪಿಸುತ್ತಿದ್ದಂತೆ ಪ್ರಖರತೆ ಇನ್ನಷ್ಟು ಹೆಚ್ಚುತ್ತಿರುವುದರ ಅನುಭವವಾಗುತ್ತಿದೆ.

ದಾಖಲಾತಿಗಳ ಪ್ರಕಾರ ಜಿಲ್ಲೆಯಲ್ಲಿ 1931ರ ಮೇ 8ರಂದು 43.3 ಡಿಗ್ರಿ ಸೆಲ್ಸಿಯಸ್ ಉಷ್ಣತೆ ದಾಖಲಾಗಿತ್ತು. ಇದು ಇದುವರೆಗಿನ ಅವಧಿಯಲ್ಲಿ ದಾಖಲಾಗಿರುವ ಗರಿಷ್ಠ ಉಷ್ಣಾಂಶ. ಹಿಂದಿನ ದಾಖಲೆಯನ್ನು ಈ ವರ್ಷ ಮುರಿಯುವ ಸಾಧ್ಯತೆ ಇದೆಯೇ ಎಂಬ ಆತಂಕ ಜನರಿಂದ ವ್ಯಕ್ತವಾಗಿದೆ. ಅಂಕಿ ಅಂಶಗಳ ಪ್ರಕಾರ, ಕನಿಷ್ಠ ಉಷ್ಣಾಂಶ 1901ರ ಜನವರಿ 5ರಂದು 3.9 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು.

ಬಿಸಿಲಿನ ತಾಪಮಾನ ಹೆಚ್ಚುತ್ತಿದ್ದಂತೆ ಮುಂಜಾನೆ 10 ಗಂಟೆಯಿಂದಲೇ ರಸ್ತೆಗಳಲ್ಲಿ ಜನಸಂಚಾರ ವಿರಳವಾಗುತ್ತಿದೆ. ಬಿಸಿಲೇರುತ್ತಿದ್ದಂತೆ ವಾಹನಗಳ ಸಂಚಾರವು ಕಡಿಮೆ ಆಗುತ್ತಿದೆ. ಬೆವರಿಳಿಯುತ್ತಿದ್ದು, ವಯಸ್ಕರು ಮತ್ತು ಮಕ್ಕಳಲ್ಲಿ ಆಯಾಸವನ್ನು ಹೆಚ್ಚಿಸುತ್ತಿದೆ. ತಂಪು ಪಾನೀಯಗಳಿಗೆ ಬೇಡಿಕೆ ಹೆಚ್ಚಿದೆ.

ಬಿಸಿಲಿನ ಪ್ರಖರತೆಯಿಂದ ಕಾಯುತ್ತಿರುವ ಜನತೆಗೆ ಅದು ಸಮಾಧಾನವನ್ನೇನೂ ನೀಡುತ್ತಿಲ್ಲ. ಆಯಾಸ ಆಗುವುದು, ಸುಸ್ತು, ತಲೆ ಸುತ್ತುವಿಕೆಯ ಅನುಭವದ ಪ್ರಕರಣಗಳು ಹೆಚ್ಚಾಗಿ ಕೇಳಿಬರುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.