ADVERTISEMENT

ಪ್ರತಿಭೆ ಅನಾವರಣಕ್ಕೆ ಯುವಜನೋತ್ಸವ ಬೆಸುಗೆ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2011, 18:30 IST
Last Updated 14 ಫೆಬ್ರುವರಿ 2011, 18:30 IST

ಹರಪನಹಳ್ಳಿ: ಅವಕಾಶ, ಪ್ರೋತ್ಸಾಹ ಹಾಗೂ ಮಾರ್ಗದರ್ಶನದ ಕೊರತೆಯಿಂದ ಕಮರಿ ಹೋಗುತ್ತಿದ್ದ ಪ್ರತಿಭೆಗಳನ್ನು ಗುರುತಿಸಲು ಯುವಜನೋತ್ಸವದ ವೇದಿಕೆಗಳು ಸಹಕಾರಿಯಾಗುತ್ತವೆ ಎಂದು ಉಪ ವಿಭಾಗಾಧಿಕಾರಿ ಕೆ. ಶ್ರೀನಿವಾಸ್ ಅಭಿಪ್ರಾಯಪಟ್ಟರು.

ಸೋಮವಾರ ಬಳ್ಳಾರಿಯ ವೀರಶೈವ ವಿದ್ಯಾವರ್ಧಕ ಸಂಘದ ಸ್ಥಳೀಯ ಅಂಬ್ಲಿ ದೊಡ್ಡಭರಮಪ್ಪ ಪ್ರಥಮದರ್ಜೆ ಕಾಲೇಜು ಹಾಗೂ ಎಸ್‌ಎಸ್‌ಎಚ್ ಪದವಿಪೂರ್ವ ಕಾಲೇಜು ಆಶ್ರಯದಲ್ಲಿ ಹಮ್ಮಿಕೊಂಡ ‘ವೀರಶೈವ ವಿದ್ಯಾವರ್ಧಕ ಯುವಜನೋತ್ಸವ-2011’ ಉದ್ಘಾಟಿಸಿ ಅವರು ಮಾತನಾಡಿದರು.

ಹಿಂದೆ ಶಾಲಾ-ಕಾಲೇಜುಗಳಲ್ಲಿ ಇಂತಹ ಕಾರ್ಯಕ್ರಮಗಳು ವಿರಳವಾಗಿದ್ದವು. ಈಗ ಕಾಲ ಬದಲಾಗಿದೆ. ಪ್ರಾಥಮಿಕ ಹಂತದಲ್ಲಿಯೇ ಮಕ್ಕಳಲ್ಲಿ ಅಡಗಿರುವ ಪ್ರತಿಭೆಯ ಅನಾವರಣಕ್ಕಾಗಿ ವಿವಿಧ ಯೋಜನೆಗಳನ್ನು ಸರ್ಕಾರ ಹಾಕಿಕೊಂಡಿದೆ.

ವಿಶ್ವವಿದ್ಯಾಲಯ, ಸಂಘ-ಸಂಸ್ಥೆಗಳು ಈ ನಿಟ್ಟಿನಲ್ಲಿ ತೊಡಗಿಸಿಕೊಂಡು ವಿದ್ಯಾರ್ಥಿಗಳ ಅಂತರಂಗದಲ್ಲಿ ಹುದುಗಿರುವ ಕ್ರಿಯಾಶೀಲತೆ ಹಾಗೂ ಕೌಶಲವನ್ನು ಪತ್ತೆ ಹಚ್ಚುವ ಕಾಯಕದಲ್ಲಿ ತೊಡಗಿರುವುದು ಹಾಗೂ ಬೆನ್ನು ತಟ್ಟುತ್ತಿರುವುದು ಶ್ಲಾಘನೀಯ ಎಂದರು.

ತಹಶೀಲ್ದಾರ್ ಟಿ.ವಿ. ಪ್ರಕಾಶ್ ಮಾತನಾಡಿ, ಆಟೋಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಪರಸ್ಪರ ಭ್ರಾತೃತ್ವ ಹಾಗೂ ಸಾಮರಸ್ಯದ ಬದುಕಿಗೆ ನಾಂದಿಯಾಗುತ್ತದೆ.ಗ್ರಾಮೀಣ ಪರಿಸರದಲ್ಲಿ ಸೌಲಭ್ಯ ವಂಚಿತ ವಿದ್ಯಾರ್ಥಿಗಳ ಸೃಜನಶೀಲತೆಗೆ ಇಂತಹ ವೇದಿಕೆಗಳು ಸಹಕಾರಿ ಎಂದರು.

ಬಳ್ಳಾರಿ ವೀವಿ ಸಂಘದ ಕಾರ್ಯದರ್ಶಿ ಎಸ್.ಎಂ. ಷಡಾಕ್ಷರಯ್ಯ ಅಧ್ಯಕ್ಷತೆ ವಹಿಸಿದ್ದರು. ಸಿಪಿಐ ಬಿ.ಎಸ್. ಬಸವರಾಜ, ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಪಟೇಲ್ ಬೆಟ್ಟನಗೌಡ, ವೀವಿ ಸಂಘದ ಪದಾಧಿಕಾರಿಗಳಾದ ಎಸ್. ಪಾಲಾಕ್ಷಯ್ಯ, ಕಣ್ಣಿ ರಾಜಶೇಖರ್, ಹೇಮಂತ್‌ರಾಜ್, ಮಟ್ಟಿ ಮಂಜುನಾಥ, ಪ್ರಾಂಶುಪಾಲರಾದ ಎಸ್. ನಾಗೇಂದ್ರಪ್ಪ, ಎಂ. ಕುರುವತ್ತೆಪ್ಪ ಇತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.