ADVERTISEMENT

ಪ್ರಮಾಣ ಪತ್ರ ವಿತರಣೆ ವಿಳಂಬ: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 15 ಜೂನ್ 2011, 19:30 IST
Last Updated 15 ಜೂನ್ 2011, 19:30 IST

ಕನಕಪುರ: ಶಾಲಾ ಕಾಲೇಜುಗಳ ಪ್ರವೇಶಕ್ಕೆ ಅಗತ್ಯವಿರುವ ಆದಾಯ ಮತ್ತು ಜಾತಿ ಪ್ರಮಾಣ ಪತ್ರ ನೀಡಲು ವಿಳಂಬ ಮಾಡುತ್ತಿರುವ ತಾಲ್ಲೂಕು ಆಡಳಿತದ ಕಾರ್ಯ ವೈಖರಿ ವಿರೋಧಿಸಿ ವಿದ್ಯಾರ್ಥಿಗಳು ಹಾಗೂ ಪೋಷಕರು ಬುಧವಾರ ತಾಲ್ಲೂಕು ಕಚೇರಿಗೆ ಮುತ್ತಿಗೆ ಹಾಕಿ ಬೀಗ ಜಡಿದು ಪ್ರತಿಭಟನೆ ನಡೆಸಿದರು.

ಪ್ರಮಾಣ ಪತ್ರಗಳಿಗಾಗಿ ಅರ್ಜಿ ಸಲ್ಲಿಸಿ ತಿಂಗಳುಗಳೇ ಕಳೆದರೂ ಇನ್ನ್ನೂ ಪ್ರಮಾಣ ಪತ್ರ ವಿತರಣೆ ಮಾಡಿಲ್ಲ. ಕೇಳಿದರೆ ಸರಿಯಾದ ಉತ್ತರ ನೀಡದೆ ಇಲ್ಲಿಂದ ಅಲ್ಲಿಗೆ, ಅಲ್ಲಿಂದ ಇಲ್ಲಿಗೆ ಅಲೆದಾಡಿಸುತ್ತಾರೆ. ಶಾಲೆ ಕಾಲೇಜುಗಳು ಈಗಾಗಲೆ ಪ್ರಾರಂಭವಾಗಿ ಪ್ರಮಾಣ ಪತ್ರವಿಲ್ಲದ ಸಾವಿರಾರು ವಿದ್ಯಾರ್ಥಿಗಳು ಶಾಲೆಗಳಿಗೆ ದಾಖಲಾಗಲಾಗುತ್ತಿಲ್ಲ., ವಿಳಂಬವಾಗಿರುವುದಕ್ಕೆ ಶಾಲಾ-ಕಾಲೇಜುಗಳು ದಂಡ ವಿಧಿಸುತ್ತಿವೆ. ಆದರೂ ತಾಲ್ಲೂಕು ಆಡಳಿತ ಪ್ರಮಾಣ ಪತ್ರ ನೀಡುವ ವ್ಯವಸ್ಥೆ ಮಾಡಿಲ್ಲವೆಂದು ಅಧಿಕಾರಿಗಳ ವಿರುದ್ದ ವಿದ್ಯಾರ್ಥಿಗಳು ಕಿಡಿಕಾರಿದರು. 
 
ಪ್ರತಿಭಟನೆಯ ನೇತೃತ್ವವಹಿಸಿದ್ದ ಬಿ.ಎಸ್.ಪಿ. ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ್ ಮತ್ತು ಜಿಲ್ಲಾ ಸಂಯೋಜಕ ಅಂದಾನಪ್ಪ ಮಾತನಾಡಿ , ತಾಲ್ಲೂಕು ಕಚೇರಿಯಲ್ಲಿ ಆಡಳಿತ ವ್ಯವಸ್ಥೆ ಕುಸಿದಿದೆ. ಅದನ್ನು ಹತೋಟಿಗೆ ತರಬೇಕಿರುವ ತಾಲ್ಲೂಕು ದಂಡಾಧಿಕಾರಿಗಳು ನಿಷ್ಕ್ರಿಯವಾಗಿದ್ದಾರೆ.

ತಾಲ್ಲೂಕು ಕಚೇರಿಯಲ್ಲಿ 6 ಸಾವಿರಕ್ಕೂ ಹೆಚ್ಚು ಪ್ರಮಾಣ ಪತ್ರಗಳ ಅರ್ಜಿ ಬಾಕಿ ಉಳಿದಿವೆ. ತಹಸೀಲ್ದಾರ್‌ರವರು ಇದಕ್ಕೆ ಅಗತ್ಯ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯಧೋರಣೆ ಅನುಸರಿಸಿ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟವಾಡುತ್ತಿದ್ದಾರೆಂದು ಆರೋಪಿಸಿದರು.

ದಂಡಾಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಜನತೆ ತಮ್ಮ ಸಮಸ್ಯೆಗಳನ್ನು ಬಗೆಹರಿಸುವಂತೆ ದಂಡಾಧಿಕಾರಿಗಳ ಬಳಿ ಕೇಳಲು ಹೋದರೆ ಅವರುಗಳು ಅದನ್ನೇ ಅಪರಾಧವೆಂದು ಅವರ ವಿರುದ್ದ ಕ್ರಿಮಿನಲ್ ಕೇಸುಗಳನ್ನು ಹಾಕಿಸುತ್ತಿದ್ದಾರೆ ಎಂದು ದೂರಿದರು.

ತಾಲ್ಲೂಕು ದಂಡಾಧಿಕಾರಿಗಳು ಸಾರ್ವಜನಿಕರ ಸಮಸ್ಯೆ ಕುಂದು-ಕೊರತೆಗಳಿಗೆ ಸ್ಪಂದಿಸಿ ಸಾರ್ವಜನಿಕ ಕೆಲಸ ಕಾರ್ಯಗಳನ್ನು ಮಾಡುವ ಬದಲು, ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಕೂಡಲೆ ಇವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು, ವಿದ್ಯಾರ್ಥಿಗಳಿಗೆ ಅಗತ್ಯವಾಗಿ ಬೇಕಿರುವ ಪ್ರಮಾಣ ಪತ್ರಗಳನ್ನು ಶೀಘ್ರವಾಗಿ ಕೊಡಸಿಕೊಡಬೇಕೆಂದು ಅವರು ಒತ್ತಾಯಿಸಿದರು.

ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಸಿ.ಕೃಷ್ಣಕುಮಾರ್ ಮಧ್ಯ ಪ್ರವೇಶಿಸಿ ದಂಡಾಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಮಾತನಾಡಿ ತ್ವರಿತವಾಗಿ ಪ್ರಮಾಣ ಪತ್ರವನ್ನು ನೀಡುವಂತೆ ಮಾತನಾಡಿ ಸ್ಥಳದಲ್ಲೇ 600 ಪ್ರಮಾಣ ಪತ್ರಗಳನ್ನು ಹಂಚಿಸುವ ಮೂಲಕ ಪ್ರತಿಭಟನಾಕಾರರ ಮನವೊಲಿಸಿ, ಪ್ರತಿಭಟನೆಯನ್ನು ಅಂತ್ಯಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.