ADVERTISEMENT

ಪ್ರವಾಸಿಗರ ಮನತಣಿಸಿದ ಆನೆ ಹಬ್ಬ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2011, 19:30 IST
Last Updated 31 ಅಕ್ಟೋಬರ್ 2011, 19:30 IST
ಪ್ರವಾಸಿಗರ ಮನತಣಿಸಿದ ಆನೆ ಹಬ್ಬ
ಪ್ರವಾಸಿಗರ ಮನತಣಿಸಿದ ಆನೆ ಹಬ್ಬ   

ಮಡಿಕೇರಿ: ಆನೆಗಳು ಹಾಗೂ ಮಾನವರ ನಡುವಿನ ಸಂಬಂಧವನ್ನು ಇನ್ನಷ್ಟು ಮಧುರಗೊಳಿಸುವ ಯತ್ನವಾಗಿ ದುಬಾರೆ ಆನೆ ಶಿಬಿರದಲ್ಲಿ ಸೋಮವಾರ ~ಆನೆ ಹಬ್ಬ~ವನ್ನು ಆಚರಿಸಲಾಯಿತು.

ಶಿಬಿರದಲ್ಲಿರುವ 12 ಗಂಡಾನೆಗಳು, 5 ಹೆಣ್ಣಾನೆಗಳು ಹಾಗೂ 3 ಮರಿಯಾನೆಗಳು ಒಟ್ಟಾಗಿ ಈ ಸಂಭ್ರಮದಲ್ಲಿ ಭಾಗವಹಿಸಿ, ನೆರೆದಿದ್ದ ಪ್ರವಾಸಿಗರಿಗೆ ಮನರಂಜನೆ ನೀಡಿದವು. ಆನೆಗಳನ್ನು ಹತ್ತಿರದಿಂದ ವೀಕ್ಷಿಸುವ, ಸೊಂಡಿಲನ್ನು ನಲ್ಮೆಯಿಂದ ಸವರುವ ಅವಕಾಶ ದೊರೆತಿದ್ದರಿಂದ ಪ್ರವಾಸಿಗರು ಖುಷಿಪಟ್ಟರು.  ಮೈಸೂರು ದಸರಾ ಉತ್ಸವದ ಜಂಬೂ ಸವಾರಿಯಲ್ಲಿ ಪಾಲ್ಗೊಂಡು ವಾಪಸ್ಸಾಗಿರುವ ವಿಕ್ರಮ ಎನ್ನುವ 47 ವರ್ಷದ ಹಿರಿಯಾನೆ ನೇತೃತ್ವದಲ್ಲಿ ಆಟೋಟಗಳು ನಡೆದವು. ಆನೆಗಳ ಪಥ ಸಂಚಲನ, ನೀರು ಚಿಮುಕಿಸುವ ಆಟ, ಫುಟ್ಬಾಲ್ ಆಟವನ್ನು ಆಡಿದವು. ಇದನ್ನು ನೋಡಿ ಖುಷಿ ಪಟ್ಟ ಪ್ರವಾಸಿಗರು ಆನೆಗಳಿಗೆ ಕಬ್ಬು ತಿನಿಸಿದರು.
ವಿಧಾನ ಪರಿಷತ್‌ನ ಸದಸ್ಯರಾದ ಎಂ.ಸಿ. ನಾಣಯ್ಯ, ಬಸವರಾಜ ಹೊರಟ್ಟಿ ಸೇರಿದಂತೆ ಇತರ ಗಣ್ಯರ ಕೊರಳಿಗೆ ಆನೆಗಳು ಹೂಮಾಲೆ ಹಾಕಿ ಸ್ವಾಗತಿಸಿದ್ದು ವಿಶೇಷವಾಗಿತ್ತು.

ವಿಧಾನ ಪರಿಷತ್ ಸದಸ್ಯ ವೀರಣ್ಣ ಮತ್ತಿಕಟ್ಟಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ರವಿ ಕುಶಾಲಪ್ಪ, ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಬಿ.ಕೆ.ಸಿಂಗ್, ಕೊಡಗು ಜಿಲ್ಲೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಿಲ್ಲೋ ಟ್ಯಾಗೋ, ಅರಣ್ಯಾಧಿಕಾರಿಗಳಾದ ಆನಂದ್, ಮೋಟಪ್ಪ, ಅಚ್ಚಪ್ಪ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.