ADVERTISEMENT

ಪ್ರಸಕ್ತ ಸಮಸ್ಯೆಗೆ ಸರ್ವೋದಯ ಮಂತ್ರ ಪರಿಹಾರ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2012, 19:30 IST
Last Updated 12 ಫೆಬ್ರುವರಿ 2012, 19:30 IST
ಪ್ರಸಕ್ತ ಸಮಸ್ಯೆಗೆ ಸರ್ವೋದಯ ಮಂತ್ರ ಪರಿಹಾರ
ಪ್ರಸಕ್ತ ಸಮಸ್ಯೆಗೆ ಸರ್ವೋದಯ ಮಂತ್ರ ಪರಿಹಾರ   

ಶ್ರೀರಂಗಪಟ್ಟಣ: ಪ್ರಜಾತಂತ್ರ, ಸಮಾಜವಾದ, ಸಮತಾವಾದ, ನಕ್ಸಲ್‌ವಾದ-ಇಂತಹ ವ್ಯವಸ್ಥೆಗಳಲ್ಲಿರುವ ಲೋಪಗಳಿಗೆ ಪರಿಹಾರ ಸಿಗಬೇಕಾದರೆ ಗಾಂಧಿ ಪ್ರತಿಪಾದಿತ ಸತ್ಯ ಶೋಧನೆ ಆಧಾರಿತ ಸರ್ವೋದಯ ಮಂತ್ರದಿಂದ ಮಾತ್ರ ಸಾಧ್ಯ ಎಂದು ಗಾಂಧಿವಾದಿ ಸುರೇಂದ್ರ ಕೌಲಗಿ ಪ್ರತಿಪಾದಿಸಿದರು.

ಪಟ್ಟಣದಲ್ಲಿ ಭಾನುವಾರ ನಡೆದ ಸರ್ವೋದಯ ಮೇಳದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಬಂಡವಾಳಶಾಹಿಯಿಂದ ಜಾಗತಿಕ ಹಿಂಸೆ ಹೆಚ್ಚುತ್ತಿದೆ. ಅಮೆರಿಕಾದಂತಹ ಶ್ರೀಮಂತ ದೇಶದಲ್ಲಿ ನೆಮ್ಮದಿ ಇಲ್ಲವಾಗಿದೆ. ಹಿಂದುಳಿದ ದೇಶಗಳ ಅರಣ್ಯ, ಸಂಸ್ಕೃತಿ, ಜೀವನ ವಿಧಾನ ಹಾಳಾಗುತ್ತಿದೆ. ಶೋಷಣೆ , ಅನ್ಯಾಯ, ತಾರತಮ್ಯ ಇರದ ಸರ್ವತಂತ್ರ ಸ್ವತಂತ್ರ ಸಮಾಜ ನಿರ್ಮಾಣ ಸರ್ವೋದಯದ ತಿರುಳು. ಅಂತಹ ಸಮಾಜ ಸ್ಥಾಪನೆ ಆಗಬೇಕಾದರೆ ಯುವಜನರು ಒಂದುಗೂಡಬೇಕು. ಗಾಂಧಿ ವಿಚಾರಧಾರೆಗಳನ್ನು ಹಳ್ಳಿ ಹಳ್ಳಿಗೆ, ಮನೆ ಮನೆಗೆ ತಲುಪಿಸಬೇಕು. ಬೃಹತ್ ಆಂದೋಲನ ರೂಪುಗೊಳ್ಳಬೇಕು ಎಂದು ಹೇಳಿದರು.

ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಮಾತನಾಡಿ, ಗಾಂಧಿ ದೃಷ್ಟಿಯಲ್ಲಿ ಮಹಿಳೆ ಮತ್ತು ಪುರುಷನ ನಡುವೆ ಯಾವುದೇ ಭೇದವಿಲ್ಲ. ಸಮಾನತೆ ನಿರ್ಮಾಣಕ್ಕೆ ಲಿಂಗತಾರತಮ್ಯ ಅಡ್ಡಿ ಆಗಬಾರದು. ಸ್ತ್ರೀಯರು ಸಬಲರಾಗಲು ಧೈರ್ಯ ಮತ್ತು ದಿಟ್ಟತನ ತೋರಬೇಕು. ಅಂತಹ ಗುಣಗಳನ್ನು ಕಲಿಸುವ ಶಿಕ್ಷಣ ಅಗತ್ಯ ಎಂದರು.

ಗಾಯಕ ನಾಮದೇವ ಶೆಣೈ `ರಘುಪತಿ ರಾಘವ ರಾಜಾರಾಂ~, `ಜೈ ಜಗತ್~, `ಕೊನೆಗೊಂಡಿತು ಓರೋರ್ವರ ಗರ್ವದ ಕಾಲ~, `ಒಂದೇ ಒಂದೇ..~ಗೀತೆಗಳನ್ನು ಹಾಡಿದರು. ಲಕ್ಷ್ಮಿ ಸತ್ಯವ್ರತ, ಶೀಲಾ ನಂಜುಂಡಯ್ಯ, ಗೀತಾ ಹರೀಶ್, ಸತ್ಯನಾರಾಯಣ, ಎಸ್.ಲಿಂಗಣ್ಣ, ಡಾ.ಸುಜಯಕುಮಾರ್, ಅ.ಸಿದ್ದೇಗೌಡ, ಎಸ್.ಹೊನ್ನಯ್ಯ, ಗಂಜಾಂ ಕೃಷ್ಣ, ಡಾ.ಕೆ.ವೈ.ಶ್ರೀನಿವಾಸ್, ಚಿತ್ರದುರ್ಗದ ಎಂ.ತಿಮ್ಮಾರೆಡ್ಡಿ ಭಾಗವಹಿಸಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.