ADVERTISEMENT

ಪ್ರಸಾದ ಸೇವಿಸಿ 40 ಮಂದಿ ಅಸ್ವಸ್ಥ

​ಪ್ರಜಾವಾಣಿ ವಾರ್ತೆ
Published 7 ಜನವರಿ 2012, 19:30 IST
Last Updated 7 ಜನವರಿ 2012, 19:30 IST

ಕೆಜಿಎಫ್: ದೇವಾಲಯದಲ್ಲಿ ಅಹೋ ರಾತ್ರಿ ನಡೆಯುತ್ತಿದ್ದ ರಾಮಭಜನೆಯಲ್ಲಿ ಪಾಲ್ಗೊಂಡ ಭಕ್ತರು ಗಸಗಸೆ ಪಾಯಸ ಸೇವಿಸಿ 40ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾದ ಘಟನೆ ಬೆಮಲ್‌ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಬ್ಯಾಟರಾಯನಹಳ್ಳಿಯಲ್ಲಿ ಶುಕ್ರವಾರ ಮುಂಜಾನೆ ನಡೆದಿದೆ.

ಮುಜರಾಯಿ ಇಲಾಖೆಗೆ ಸೇರಿದ ಬ್ಯಾಟರಾಯಸ್ವಾಮಿ ದೇಗುಲದಲ್ಲಿ ಎರಡು ದಿನಗಳಿಂದ ರಾಮಭಜನೆ ನಡೆಯುತ್ತಿತ್ತು. ಶುಕ್ರವಾರ ಸಾವಿರಾರು ಭಕ್ತರು ಸೇರುವ ನಿರೀಕ್ಷೆ ಇದ್ದುದರಿಂದ ಬೆಳಗಿನ ಜಾವದಿಂದಲೇ ಅಡುಗೆ ಸಿದ್ಧವಾಗುತ್ತಿತ್ತು. ಅದೇ ಸಮಯದಲ್ಲಿ ಚಿನ್ನಹಳ್ಳಿಯ ಭಕ್ತರೊಬ್ಬರು ಸಣ್ಣ ಪಾತ್ರೆಯಲ್ಲಿ ಗಸಗಸೆ ಪಾಯಸವನ್ನು ಅಡುಗೆಯವರಿಗೆ ಕೊಟ್ಟು ದಣಿವು ಆರಿಸಿಕೊಳ್ಳುವಂತೆ ತಿಳಿಸಿದ್ದಾರೆ. ಅಡುಗೆಯವರು ಪಾಯಸ ಸೇವಿಸಿದ ನಂತರ ಉಳಿದದ್ದನ್ನು ಭಕ್ತರಿಗೆ ನೀಡಲಾಗಿದೆ.

ಪಾಯಸ ಕುಡಿದ ಸ್ವಲ್ಪ ಸಮಯದಲ್ಲೇ ಕೆಲವರು ವಾಂತಿ ಮಾಡಿದ್ದಾರೆ. ಮತ್ತೆ ಕೆಲವರು ತಲೆ ಸುತ್ತು ಬಂದು ಬಿದ್ದಿದ್ದಾರೆ. ಕೂಡಲೇ ಅಂಬುಲೆನ್ಸ್, ಪೊಲೀಸ್ ವಾಹನಗಳಲ್ಲಿ ಕೆಜಿಎಫ್ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ.
ದೊಡ್ಡಚಿನ್ನಹಳ್ಳಿಯಲ್ಲಿ ಗುರುವಾರ ರಾಮಭಜನೆ ಹಮ್ಮಿಕೊಳ್ಳಲಾಗಿತ್ತು. ಭಜನೆ ಮಾಡುವವರಿಗಾಗಿ ರಾಮರಸ ತಯಾರಾಗಿತ್ತು. ಅಂದು ಉಳಿದ ರಾಮರಸವನ್ನು ಮರುದಿನ ಬ್ಯಾಟರಾಯನಹಳ್ಳಿ ದೇವಾಲಯಕ್ಕೆ ತಂದು ವಿತರಿಸಿದ್ದಾರೆ. ಅದರಿಂದ ಈ ಘಟನೆ ನಡೆದಿದೆ. ರಾಮರಸ ವಶಪಡಿಸಿಕೊಂಡು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪಾಯಸದಲ್ಲಿ ಮಾದಕ ವಸ್ತು ಮಿಶ್ರಿತವಾಗಿರಬಹುದು ಎಂದು ಶಂಕಿಸಲಾಗಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೇವಜ್ಯೋತಿ ರೇ, ಶಾಸಕ ವೈ.ಸಂಪಂಗಿ, ತಹಶೀಲ್ದಾರ್ ಮಂಗಳಾ, ಡಿವೈಎಸ್‌ಪಿ ಶೇಷನ್ ಆಸ್ಪತ್ರೆಗೆ ಭೇಟಿ ನೀಡಿ ವಿಚಾರಣೆ ನಡೆಸಿದರು. ಬೆಮಲ್‌ನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.