ADVERTISEMENT

ಫಿಟ್ಟರ್, ಎಲೆಕ್ಟ್ರಿಷಿಯನ್ ಪರೀಕ್ಷೆ ಮುಂದೂಡಿಕೆ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2012, 19:30 IST
Last Updated 3 ಆಗಸ್ಟ್ 2012, 19:30 IST

ಹಾವೇರಿ: ಕೈಗಾರಿಕಾ ತರಬೇತಿ (ಐಟಿಐ) ಎರಡು ವಿಷಯಗಳ ಪ್ರಶ್ನೆ ಪತ್ರಿಕೆಗಳು ಬಹಿರಂಗವಾಗಿರುವುದು ದೃಢಪಟ್ಟಿರುವುದರಿಂದ ಶುಕ್ರವಾರ ಜಿಲ್ಲೆಯಾದ್ಯಂತ ನಾಲ್ಕು ಪರೀಕ್ಷಾ ಕೇಂದ್ರಗಳಲ್ಲಿ ನಡೆಯಬೇಕಿದ್ದ ಪರೀಕ್ಷೆಗಳನ್ನು ಅನಿರ್ದಿಷ್ಟ ಅವಧಿಗೆ ಮುಂದೂಡಲಾಗಿದೆ.

ಫಿಟ್ಟರ್ ಹಾಗೂ ಎಲೆಕ್ಟ್ರಿಷಿಯನ್ ವಿಷಯಗಳ ಪರೀಕ್ಷೆ ಬರೆಯಲು ಜಿಲ್ಲೆಯ 1,573 ವಿದ್ಯಾರ್ಥಿಗಳು ಶುಕ್ರವಾರ ಪರೀಕ್ಷಾ ಕೇಂದ್ರಗಳಿಗೆ ಬಂದಿದ್ದರು. ಉದ್ಯೋಗ ಮತ್ತು ತರಬೇತಿ ಇಲಾಖೆ ಆಯುಕ್ತರು ಪರೀಕ್ಷೆಗೆ ಶೀಘ್ರವೇ ದಿನಾಂಕವನ್ನು ನಿಗದಿಪಡಿಸಿ ಪ್ರಕಟಿಸುವರು ಎಂದು ಜಿಲ್ಲಾಧಿಕಾರಿ ಎಚ್.ಜಿ.ಶ್ರೀವರ ತಿಳಿಸಿದ್ದಾರೆ.

ಬಹಿರಂಗಗೊಂಡಿದ್ದ ಪ್ರಶ್ನೆ ಪತ್ರಿಕೆಗಳ ಪ್ರತಿಗಳು ಹಾಗೂ ಶುಕ್ರವಾರ ನಡೆಯಬೇಕಿದ್ದ ಪರೀಕ್ಷೆಯ ಪ್ರಶ್ನೆಪತ್ರಿಕೆಗಳನ್ನು ನಗರದ ಆದರ್ಶ ಐಟಿಐ ಕಾಲೇಜಿನಲ್ಲಿ ಪರಿಶೀಲಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಇವೆರಡೂ ಪ್ರಶ್ನೆಪತ್ರಿಕೆಗಳು ಒಂದೇ ಆಗಿವೆ. ಜಿಲ್ಲಾ ವ್ಯಾಪ್ತಿಯ ಹಾವೇರಿ, ಹಿರೇಕೆರೂರ, ಗುತ್ತಲ ಹಾಗೂ ಕವಲೆತ್ತು ಪರೀಕ್ಷೆ ಕೇಂದ್ರಗಳಲ್ಲಿನ ಪರೀಕ್ಷೆ ಮುಂದೂಡಲಾಗಿದೆ.

ಪ್ರಶ್ನೆಪತ್ರಿಕೆ ಯಾವ ರೀತಿ ಬಹಿರಂಗವಾಯಿತು ಎಂಬುದನ್ನು ಪೊಲೀಸ್ ತನಿಖೆ ಮೂಲಕ ಪತ್ತೆಹಚ್ಚಲಾಗುವುದು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದರು.

ಜನವರಿ ಪ್ರಶ್ನೆ ಪತ್ರಿಕೆಗಳೇ ರೀಪಿಟ್: ಈಗ ಬಹಿರಂಗಗೊಂಡ ಐಟಿಐ ಎರಡು ವಿಷಯಗಳ ಪ್ರಶ್ನೆ ಪತ್ರಿಕೆಗಳು ಜನವರಿ 2012 ರ ಪೂರಕ ಪರೀಕ್ಷೆಯಲ್ಲಿ ನೀಡಿದ್ದ  ಪ್ರಶ್ನೆ ಪತ್ರಿಕೆಗಳೇ ಆಗಿವೆ. ಈ ವಿಷಯವನ್ನು ಉದ್ಯೋಗ ಮತ್ತು ತರಬೇತಿ ಇಲಾಖೆ ಆಯುಕ್ತರು ಗುರುವಾರ ರಾತ್ರಿ ಖಚಿತಪಡಿಸಿದ್ದರು.

ದೂರು ಬಂದ ನಂತರ ತನಿಖೆ: ಉದ್ಯೋಗ ಮತ್ತು ತರಬೇತಿ ಇಲಾಖೆ ಅಧಿಕಾರಿಗಳು ದೂರು ನೀಡಿದ ನಂತರ ನಡೆಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಚೇತನಸಿಂಗ್ ರಾಠೋರ್ ತಿಳಿಸಿದರು.

`ಹಾವೇರಿ ಜಿಲ್ಲೆಯಲ್ಲಿ ಬಹಿರಂಗಗೊಂಡಿಲ್ಲ~
 ಜಿಲ್ಲೆಯ ಹಾವೇರಿ, ಹಿರೇಕೆರೂರ ಹಾಗೂ ರಾಣೆಬೆನ್ನೂರ ಖಜಾನೆಗಳಲ್ಲಿ ಪ್ರಶ್ನೆಪತ್ರಿಕೆಯನ್ನು ಇಡಲಾಗಿತ್ತು. ಪ್ರಶ್ನೆಪತ್ರಿಕೆಗಳು ಬಹಿರಂಗಗೊಂಡ ಸುದ್ದಿ ತಿಳಿದ ತಕ್ಷಣ ಮೂರು ಖಜಾನೆಯಲ್ಲಿನ ಪ್ರಶ್ನೆ ಪತ್ರಿಕೆಗಳ ಬಂಡಲ್‌ಗಳನ್ನು ತಪಾಸಣೆ ಮಾಡಲಾಗಿದೆ.

ಎಲ್ಲಿಯೂ ಬಂಡಲ್‌ಗಳನ್ನು ಒಡೆದಿರುವುದು ಗಮನಕ್ಕೆ ಬಂದಿಲ್ಲ. ಹೀಗಾಗಿ ಬಹಿರಂಗಗೊಂಡ ಪ್ರಶ್ನೆ ಪತ್ರಿಕೆಗಳು ಬೇರೆ ಜಿಲ್ಲೆಗಳಿಂದ ಬಂದಿರುವ ಸಾಧ್ಯತೆಯಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT