ADVERTISEMENT

ಬರಗಾಲ: ಉತ್ಸವಗಳು ರದ್ದು

​ಪ್ರಜಾವಾಣಿ ವಾರ್ತೆ
Published 27 ಜನವರಿ 2012, 19:30 IST
Last Updated 27 ಜನವರಿ 2012, 19:30 IST

ಕೊಪ್ಪಳ: ರಾಜ್ಯದಲ್ಲಿ ಈ ವರ್ಷ ಬಹುತೇಕ ಜಿಲ್ಲೆಗಳಲ್ಲಿ ಬರ ಪರಿಸ್ಥಿತಿ ಇರುವ ಹಿನ್ನೆಲೆಯಲ್ಲಿ ಜಿಲ್ಲಾ ಉತ್ಸವ ಸೇರಿದಂತೆ ವಿವಿಧ ಉತ್ಸವಗಳನ್ನು ಆಚರಿಸದಿರಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಈ ಸಂಬಂಧ ಎಲ್ಲ ಜಿಲ್ಲಾಧಿಕಾರಿಗಳಿಗೆ ಸುತ್ತೋಲೆ ಹೊರಡಿಸಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬರದಿಂದ ತತ್ತರಿಸಿರುವ ಜಿಲ್ಲೆಗಳಲ್ಲಿ ಈ ವರ್ಷ ಉತ್ಸವ, ವೈಭವ ಹಾಗೂ ಸಂಭ್ರಮದಂತಹ ಕಾರ್ಯಕ್ರಮಗಳ ಆಚರಣೆ ಹಮ್ಮಿಕೊಳ್ಳಬಾರದು ಎಂದು ಸೂಚಿಸಿದೆ.

2011ನೇ ಸಾಲಿನಲ್ಲಿ ಮಳೆ ಅಭಾವದಿಂದಾಗಿ ರಾಜ್ಯದ 99 ತಾಲ್ಲೂಕುಗಳಲ್ಲಿ ಬರ ಬಿದ್ದಿದೆ. ಈ ಹಿನ್ನೆಲೆಯಲ್ಲಿ ಸದರಿ ತಾಲ್ಲೂಕುಗಳನ್ನು ಒಳಗೊಂಡಿರುವ ಜಿಲ್ಲೆಗಳಲ್ಲಿ ಉತ್ಸವಗಳನ್ನು ಆಯೋಜಿಸುವಂತಿಲ್ಲ. ಹೀಗಾಗಿ ಈ ಬಾರಿ ಹಂಪಿ ಉತ್ಸವ, ಕನಕಗಿರಿ, ಆನೆಗೊಂದಿ, ಲಕ್ಕುಂಡಿ, ಚಾಲುಕ್ಯ ಹಾಗೂ ಹೊಯ್ಸಳ ಉತ್ಸವಗಳನ್ನು ಹಮ್ಮಿಕೊಳ್ಳಬಾರದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಆದರೆ, ಬರ ಪರಿಸ್ಥಿತಿ ಇದ್ದರೂ ಈಗಾಗಲೇ ಹಲವಾರು ಉತ್ಸವಗಳನ್ನು ಆಚರಿಸಲಾಗಿದೆ. ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಸರ್ಕಾರದ ವತಿಯಿಂದ 15 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಇಟಗಿ ಉತ್ಸವ ನೆರವೇರಿತು. ಅದೇ ರೀತಿ ಧಾರವಾಡ ಉತ್ಸವ, ಕದಂಬ ಉತ್ಸವ ಹಾಗೂ ಕಿತ್ತೂರು ಉತ್ಸವಗಳನ್ನೂ ಆಚರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.