ADVERTISEMENT

ಬರಪೀಡಿತ ಪಟ್ಟಿಗೆ ಸೇರದ ತಾಲ್ಲೂಕು: ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2011, 19:30 IST
Last Updated 4 ಅಕ್ಟೋಬರ್ 2011, 19:30 IST

ಜಗಳೂರು (ದಾವಣಗೆರೆ ಜಿಲ್ಲೆ):  ಬರಪೀಡಿತ ತಾಲ್ಲೂಕುಗಳ ಪಟ್ಟಿಯಿಂದ ಜಗಳೂರು ಹಾಗೂ ಹರಪನಹಳ್ಳಿ ತಾಲ್ಲೂಕುಗಳನ್ನು ಕೈಬಿಟ್ಟಿರುವ ಸರ್ಕಾರದ ಕ್ರಮ ಆಘಾತಕಾರಿಯಾಗಿದ್ದು, ಒಂದೆರೆಡು ದಿನಗಳಲ್ಲಿ ಈ ಬಗ್ಗೆ ಉಗ್ರ ನಿರ್ಧಾರ ಕೈಗೊಳ್ಳುವುದಾಗಿ ಶಾಸಕ ಎಸ್.ವಿ. ರಾಮಚಂದ್ರ ಹೇಳಿದರು.

ರಾಜ್ಯದ 69 ತಾಲ್ಲೂಕುಗಳನ್ನು `ಬರಪೀಡಿತ~ ಎಂದು ಘೋಷಿಸಲಾಗಿದೆ. ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಜಗಳೂರು ಹಾಗೂ ಹರಪನಹಳ್ಳಿ ತಾಲ್ಲೂಕುಗಳಲ್ಲಿ ಮಳೆ ಇಲ್ಲದೇ ಬೆಳೆಗಳು ಸಂಪೂರ್ಣ ನಾಶವಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಆದರೆ ಎರಡೂ ತಾಲ್ಲೂಕಗಳನ್ನು `ಬರಪೀಡಿತ~ ಪಟ್ಟಿಯಿಂದ ಹೊರಗಿಡುವ ಮೂಲಕ ತಾರತಮ್ಯ ನೀತಿಯನ್ನು ಪ್ರದರ್ಶಿಸಿದೆ. ಇದಕ್ಕೆ ಜಿಲ್ಲಾಡಳಿತದ ವೈಫಲ್ಯ ಪ್ರಮುಖ ಕಾರಣವಾಗಿದೆ ಎಂದು ಅವರು ಪಟ್ಟಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ತಾಲ್ಲೂಕಿನಲ್ಲಿ ಈ ವರ್ಷ ವಾಡಿಕೆ ಪ್ರಮಾಣಕ್ಕಿಂತ ಕಡಿಮೆ ಮಳೆಯಾಗಿದ್ದು, ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಾಶವಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಆದರೆ ಕಂದಾಯ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಸರ್ಕಾರಕ್ಕೆ ತಪ್ಪು ವರದಿ ನೀಡಿರುವುದರಿಂದ ಕ್ಷೇತ್ರದ ಜನತೆಗೆ ಅನ್ಯಾಯವಾಗಿದ್ದು, ಸರ್ಕಾರ ಕೂಡಲೇ ತಾರತಮ್ಯ ಸರಿಪಡಿಸದೇ ಇದ್ದಲ್ಲಿ ಸಂಸತ್ ಸದಸ್ಯರೊಂದಿಗೆ ಚರ್ಚಿಸಿ ಉಗ್ರ ನಿರ್ಧಾರ ಕೈಗೊಳ್ಳಬೇಕಾಗುತ್ತದೆ ಎಂದು ರಾಮಚಂದ್ರ ಸ್ಪಷ್ಟಪಡಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.