ADVERTISEMENT

ಬಸವರಾಜ ಕಟ್ಟೀಮನಿ ಪತ್ರಿಕಾ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2012, 19:30 IST
Last Updated 5 ಅಕ್ಟೋಬರ್ 2012, 19:30 IST

ಬೆಳಗಾವಿ: `ಪ್ರಜಾವಾಣಿ~ಯ ನಿವೃತ್ತ ಸಹ ಸಂಪಾದಕ ಆರ್.ಪಿ.ಜಗದೀಶ ಮತ್ತು ಇಲ್ಲಿಯ ~ನಾಡೋಜ~ ಪತ್ರಿಕೆ ಸಂಪಾದಕ ರಾಘವೇಂದ್ರ ಜೋಶಿ ಅವರಿಗೆ ಬಸವರಾಜ ಕಟ್ಟೀಮನಿ ಪತ್ರಿಕಾ ಪ್ರಶಸ್ತಿಯನ್ನು ನೀಡಿ ಶುಕ್ರವಾರ ಇಲ್ಲಿ ಆತ್ಮೀಯವಾಗಿ ಗೌರವಿಸಲಾಯಿತು.

ಇಲ್ಲಿನ ಕುಮಾರ ಗಂಧರ್ವ ರಂಗಮಂದಿರದಲ್ಲಿ ಬಸವರಾಜ ಕಟ್ಟೀಮನಿ ಪ್ರತಿಷ್ಠಾನ ಆಯೋಜಿಸಿದ್ದ ಸಮಾರಂಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ಆಯುಕ್ತ ಕೆ.ಆರ್.ರಾಮಕೃಷ್ಣ ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿಯು ತಲಾ 50 ಸಾವಿರ ರೂಪಾಯಿ ನಗದು, ಫಲಕ ಒಳಗೊಂಡಿದೆ.

ಅಧ್ಯಕ್ಷತೆ ವಹಿಸಿದ್ದ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ.ಎಂ.ಕಲಬುರ್ಗಿ, ~ಕಟ್ಟೀಮನಿಯವರು ಕನ್ನಡದ ದೊಡ್ಡ ಸಾಹಿತಿ. ಅವರ 40 ಕಾದಂಬರಿ, 10 ಕಥಾ ಸಂಕಲನ ಹಾಗೂ ಒಂದು ಆತ್ಮಚರಿತ್ರೆ ಪ್ರಕಟಿಸುವ ಅಗತ್ಯವಿದೆ~ ಎಂದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಜಗದೀಶ, ಪತ್ರಕರ್ತರು ಧ್ಯೇಯ, ಆದರ್ಶಗಳನ್ನಿಟ್ಟುಕೊಂಡು ಪ್ರಾಮಾಣಿಕರಾಗಿ ಕೆಲಸ ನಿರ್ವಹಿಸಬೇಕು ಎಂದರು.

ಪ್ರಶಸ್ತಿ ಸ್ವೀಕರಿಸಿದ ರಾಘವೇಂದ್ರ ಜೋಶಿಯವರು, ಕಟ್ಟೀಮನಿ ಅವರೊಂದಿಗಿನ ಒಡನಾಟವನ್ನು ಸ್ಮರಿಸಿಕೊಂಡರು. 

ಅಭಿನಂದನಾ ಭಾಷಣ ಮಾಡಿದ ವಿಜಾಪುರ ಮಹಿಳಾ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ. ಓಂಕಾರ ಕಾಕಡೆ, `ಮಹಿಳಾ ವಿವಿಯಲ್ಲಿ ಬಸವರಾಜ ಕಟ್ಟೀಮನಿ ದತ್ತಿ ನಿಧಿ ಸ್ಥಾಪಿಸಿ, ಪ್ರತಿ ವರ್ಷ ಉಪನ್ಯಾಸ ಕಾರ್ಯಕ್ರಮ ನಡೆಸಲಾಗುವುದು. ಕಟ್ಟೀಮನಿಯವರ ಪತ್ರಿಕೆಗಳನ್ನು ಸಂಗ್ರಹಿಸುವುದರ ಜತೆಗೆ ಕಿರು ಸಂಶೋಧನೆ ಹಾಗೂ ಶಾಸ್ತ್ರೀಯ ಅಧ್ಯಯನಕ್ಕೆ ಒಳಪಡಿಸಲಾಗುವುದು~ ಎಂದರು.

ಶಿವಾನಂದ ಡೋಣಿ, ಭೀಮಗೌಡ ವೇದಿಕೆಯಲ್ಲಿದ್ದರು. ಶಿವಕುಮಾರ ಕಟ್ಟೀಮನಿ ಸ್ವಾಗತಿಸಿದರು.  ಡಾ. ರಾಮಕೃಷ್ಣ ಮರಾಠೆ ಪರಿಚಯಿಸಿದರು. ಬಸವರಾಜ ಸಾದರ ಹಾಗೂ ಪ್ರೊ. ಚಂದ್ರಶೇಖರ ಅಕ್ಕಿ ಪ್ರಶಸ್ತಿ ಪತ್ರ ವಾಚಿಸಿದರು. ಶಿರೀಷ್ ಜೋಶಿ ನಿರೂಪಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.