ADVERTISEMENT

ಬಹಿಷ್ಕಾರದಿಂದ ಕಳೆಗುಂದಿದ ಜಯಂತಿ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2017, 6:11 IST
Last Updated 7 ನವೆಂಬರ್ 2017, 6:11 IST
ಚಿಕ್ಕಬಳ್ಳಾಪುರದಲ್ಲಿ ಸೋಮವಾರ ಕನಕದಾಸ ಜಯಂತಿ ಪ್ರಯುಕ್ತ ಆಯೋಜಿಸಿದ್ದ ಅಲಂಕೃತ ವಾಹನಗಳ ಮೆರವಣಿಗೆ
ಚಿಕ್ಕಬಳ್ಳಾಪುರದಲ್ಲಿ ಸೋಮವಾರ ಕನಕದಾಸ ಜಯಂತಿ ಪ್ರಯುಕ್ತ ಆಯೋಜಿಸಿದ್ದ ಅಲಂಕೃತ ವಾಹನಗಳ ಮೆರವಣಿಗೆ   

ಚಿಕ್ಕಬಳ್ಳಾಪುರ: ಕುರುಬ ಸಮುದಾಯ ಮತ್ತು ಕಾಂಗ್ರೆಸ್ ಮುಖಂಡ ಗಂಗರೇಕಾಲುವೆ ನಾರಾಯಣಸ್ವಾಮಿ ಅವರಿಗೆ ಕನಕ ಜಯಂತಿ ಕಾರ್ಯಕ್ರಮದ ವೇದಿಕೆಯಲ್ಲಿ ಕುಳಿತುಕೊಳ್ಳಲು ಅವಕಾಶ ನೀಡದಿರುವುದನ್ನು ಖಂಡಿಸಿ ಕುರುಬ ಸಮುದಾಯದವರು ಸೋಮವಾರ ಜಯಂತಿ ವೇದಿಕೆ ಕಾರ್ಯಕ್ರಮ ಬಹಿಷ್ಕರಿಸಿದರು.

ನಗರದಲ್ಲಿ ಬೆಳಿಗ್ಗೆಯಿಂದಲೇ ಸಡಗರದಿಂದ ಆರಂಭಗೊಂಡ ಕನಕ ಜಯಂತಿ ಆಚರಣೆ ಮಧ್ಯಾಹ್ನ ವೇದಿಕೆ ಕಾರ್ಯಕ್ರಮದ ಹೊತ್ತಿಗೆ ಬೇರೆಯದೇ ಸ್ವರೂಪ ಪಡೆಯಿತು. ಮಧ್ಯಾಹ್ನದವರೆಗೆ ನಗರದ ಪ್ರಮುಖ ಬೀದಿಗಳಲ್ಲಿ ಸಾಲಂಕೃತ ಪಲ್ಲಕ್ಕಿಗಳೊಂದಿಗೆ ನಗುತ್ತ, ಬೀಗುತ್ತ ಬಂದವರು ದಿಢೀರ್‌ ಬೆಳವಣಿಗೆಯಲ್ಲಿ ಕಾರ್ಯಕ್ರಮ ಬಹಿಷ್ಕರಿಸಿದ್ದು ನೆರೆದವರನ್ನು ವಿಚಲಿತರನ್ನಾಗಿ ಮಾಡಿತ್ತು. ಕೊನೆಗೆ ಖಾಲಿ ಕುರ್ಚಿಗಳು, ಬೆರಳೆಣಿಕೆ ಜನರ ನಡುವೆ ಕಳೆಗುಂದಿದ ಕಾರ್ಯಕ್ರಮದ ‘ಶಾಸ್ತ್ರ’ ಮುಗಿಸಲಾಯಿತು.

ಎಂ.ಜಿ.ರಸ್ತೆಯ ಮರುಳಸಿದ್ದೇಶ್ವರ ವೃತ್ತದಿಂದ ಆರಂಭಗೊಂಡ ಮೆರವಣಿಗೆ ವೇದಿಕೆ ಕಾರ್ಯಕ್ರಮ ನಡೆದ ಬಿ.ಬಿ.ರಸ್ತೆಯ ಜೂನಿಯರ್‌ ಕಾಲೇಜ್‌ ವರೆಗೆ ಸಾಗಿತು. ಈ ವೇಳೆ ಸಮುದಾಯದ ಯುವಕರು ನಾರಾಯಣಸ್ವಾಮಿ ಹೆಗಲ ಮೇಲೆ ಹೊತ್ತು ಮೆರವಣಿಗೆ ಮಾಡುತ್ತ ಬಂದ್ದದ್ದು ಗಮನ ಸೆಳೆಯಿತು.

ADVERTISEMENT

ನಂದಿ ರಂಗಮಂದಿರದಲ್ಲಿ ವೇದಿಕೆ ಕಾರ್ಯಕ್ರಮಕ್ಕೆ ಅಣಿಯಾಗುತ್ತಿದ್ದಂತೆ ಸಮುದಾಯದ ಕೆಲವರು ನಾರಾಯಣಸ್ವಾಮಿ ಅವರಿಗೆ ವೇದಿಕೆ ಮೇಲೆ ಕುಳಿತುಕೊಳ್ಳುವಂತೆ ಒತ್ತಾಯಪಡಿಸಿದರು. ಆಗ ಅವರ ವೇದಿಕೆ ಹತ್ತಲು ಹೋದಾಗ ಶಿಷ್ಟಾಚಾರದ ಹೆಸರಿನಲ್ಲಿ ಅವರನ್ನು ತಡೆದ ಪೊಲೀಸ್ ಅಧಿಕಾರಿಗಳು ಅವಕಾಶ ನಿರಾಕರಿಸಿದರು.

ಇದು ಸಮದಾಯದ ಜನರನ್ನು ಕೆರಳಿಸಿತು. ಈ ವೇಳೆ ಕೆಲ ಮುಖಂಡರು ಪೊಲೀಸರೊಂದಿಗೆ ವಾಗ್ವಾದ ಕೂಡ ನಡೆಸಿದರು. ಬಳಿಕ ನಾರಾಯಣಸ್ವಾಮಿ ಅವರು ಅಲ್ಲಿಂದ ನಿರ್ಗಮಿಸಿದರು. ಈ ಸಂದರ್ಭದಲ್ಲಿ ಆಕ್ರೋಶಗೊಂಡ ಜನರು ಕಾರ್ಯಕ್ರಮ ಬಹಿಷ್ಕರಿಸುವುದಾಗಿ ಘೋಷಿಸಿ ಅಲ್ಲಿದವರನ್ನೆಲ್ಲ ಕರೆದುಕೊಂಡು ಹೊರನಡೆದರು. ಈ ವೇಳೆ ವೇದಿಕೆ ಮೇಲಿದ್ದ ಸಮುದಾಯದ ಕೆಲ ಮುಖಂಡರು ಮೈಕ್‌ ಮೂಲಕ ಮನವಿ ಮಾಡಿಕೊಂಡರೂ ಪ್ರಯೋಜನವಾಗಲಿಲ್ಲ.

ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಡಾ.ಕೆ.ಸುಧಾಕರ್‌, ‘ಕನಕದಾಸರ ತತ್ವ, ಆದರ್ಶಗಳು ಕೇವಲ ಒಂದು ಜಾತಿಗೆ ಸೀಮಿತವಾಗಬಾರದು. ಎಲ್ಲಾ ಸಮುದಾಯಗಳ ಅವರ ಚಿಂತನೆಯನ್ನು ಅರಿತುಕೊಳ್ಳಬೇಕು. ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಕನಕದಾಸರು ಸಮಾಜದಲ್ಲಿದ್ದ ಅಸ್ಪೃಶ್ಯತೆ, ಶೋಷಣೆ , ಲಿಂಗ ತಾರತಮ್ಯ ಹೋಗಲಾಡಿಸಲು ಕೀರ್ತನೆಗಳ ಮೂಲಕ ಕೊಡುಗೆ ಅಪಾರವಾದ್ದದ್ದು’ ಎಂದು ಹೇಳಿದರು.

‘ಇವತ್ತು ನಾವು ಕನಕದಾಸರ ತತ್ವ, ಸಿದ್ಧಾಂತಗಳನ್ನು ಅಳವಡಿಸಿಕೊಂಡು ಅರ್ಥಪೂರ್ಣವಾಗಿ ಅವರ ಜಯಂತಿ ಆಚರಿಸಲು ಸಾಧ್ಯವಾಗುತ್ತಿಲ್ಲ. ಕೇವಲ ಅವರನ್ನು ಒಂದು ಜಾತಿಗೆ ಸೀಮಿತಗೊಳಿಸುತ್ತಿರುವುದು ಬೇಸರದ ಸಂಗತಿ’ ಎಂದು ತಿಳಿಸಿದರು.

‘ಇವತ್ತು ಸಮಾಜದಲ್ಲಿ ಕೆಲವರು ಜಾತಿ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಸಮುದಾಯಗಳು ಇದನ್ನು ಅರ್ಥ ಮಾಡಿಕೊಂಡು ಕನಕ ದಾಸರ ಆದರ್ಶಗಳನ್ನು ಅಳವಡಿಸಿಕೊಂಡು ಆರ್ಥಿಕ, ಶೈಕ್ಷಣಿಕ, ಸಾಮಾಜಿಕವಾಗಿ ಅಭಿವೃದ್ಧಿ ಹೊಂದಬೇಕು. ಜತೆಗೆ ಸಂಘಟಿತರಾಗಬೇಕು. ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇವಲ ಕುರುಬ ಸಮುದಾಯಕ್ಕೆ ಯೋಜನೆ, ಕಾರ್ಯಕ್ರಮಗಳನ್ನು ಕೊಟ್ಟಿಲ್ಲ. ಎಲ್ಲಾ ಸಮುದಾಯಗಳ ಅಭಿವೃದ್ದಿಗಾಗಿ ದುಡಿದಿದ್ದಾರೆ’ ಎಂದರು.

ಉಪ ವಿಭಾಗಾಧಿಕಾರಿ ಶಿವಸ್ವಾಮಿ ಮಾತನಾಡಿ, ‘ಕನಕದಾಸರ ಭಕ್ತಿ, ಆಚಾರ, ವಿಚಾರ, ಕೀರ್ತನೆಗಳನ್ನು ಕೇವಲ ಓದಿಗೆ ಸೀಮಿತಗೊಳಿಸಬಾರದು. ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಮಾತ್ರ ಅವುಗಳಿಗೆ ಅರ್ಥ ಸಿಗುತ್ತದೆ. ಕನಕದಾಸರು ಕೀರ್ತನೆಗಳ ಮೂಲಕ ಮೌಢ್ಯಗಳನ್ನು ಅಳಿಸಿ ಸುಂದರ ಸಮಾಜ ಕಟ್ಟಲು ಮುಂದಾಗಿದ್ದರು’ ಎಂದು ತಿಳಿಸಿದರು.

‘ಸಮುದಾಯದವರು ಸಂಘಟಿತರಾಗಿ ನಿಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಪ್ರಯತ್ನಿಸಬೇಕು. ಜಾತಿ, ಧರ್ಮ ಎಂಬ ಪಿಡುಗು ಹುಟ್ಟು ಹಾಕುವ ಸಮಾಜ ಘಾತುಕ ಶಕ್ತಿಗಳ ವಿರುದ್ಧ ಹೋರಾಡಬೇಕು. ಆಗಲೇ ನಾವು ಉತ್ತಮ ಪ್ರಜೆಗಳಾಗಲು ಸಾಧ್ಯ’ ಎಂದು ಹೇಳಿದರು.

ಎಸ್ಸೆಸ್ಸೆಲ್ಸಿ ಮತ್ತು ದ್ವೀತಿಯ ಪಿಯು ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ಕುರುಬ ಸಮುದಾಯದ ವಿದ್ಯಾರ್ಥಿಗಳಿಗೆ ಕಾರ್ಯಕ್ರಮದಲ್ಲಿ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಪಿ.ಎನ್.ಕೇಶವರೆಡ್ಡಿ, ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಯಲವಹಳ್ಳಿ ಎನ್.ರಮೇಶ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಂ.ಮುನಿಯಪ್ಪ, ಜಿಲ್ಲಾಧಿಕಾರಿ ದೀಪ್ತಿ ಕಾನಡೆ, ಎಸ್ಪಿ ಕಾರ್ತಿಕ್ ರೆಡ್ಡಿ, ತಹಶೀಲ್ದಾರ್‌ ಕೆ.ನರಸಿಂಹಮೂರ್ತಿ, ಕುರುಬರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಮಚಂದ್ರಪ್ಪ, ಕುರುಬರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಮುನಿಯಪ್ಪ, ಯುವ ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಸುನೀಲ್‌ ಕುಮಾರ್‌, ಮುಖಂಡರಾದ ಲಕ್ಷ್ಮಯ್ಯ, ನರಸಿಂಹಮೂರ್ತಿ, ಸಿದ್ದರಾಮಯ್ಯ, ರಾಮಕೃಷ್ಣಪ್ಪ, ಸುಮಿತ್ರಮ್ಮ, ಶ್ರೀನಿವಾಸ್‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.