ADVERTISEMENT

ಬಾಲ ಕಾರ್ಮಿಕರ ನಿರ್ಮೂಲನೆಗೆ ಸಂಕಲ್ಪ ಅಗತ್ಯ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2012, 19:30 IST
Last Updated 3 ಫೆಬ್ರುವರಿ 2012, 19:30 IST
ಬಾಲ ಕಾರ್ಮಿಕರ ನಿರ್ಮೂಲನೆಗೆ ಸಂಕಲ್ಪ ಅಗತ್ಯ
ಬಾಲ ಕಾರ್ಮಿಕರ ನಿರ್ಮೂಲನೆಗೆ ಸಂಕಲ್ಪ ಅಗತ್ಯ   

ಶಿವಮೊಗ್ಗ: ಸದೃಢ ಸಮಾಜ ನಿರ್ಮಾಣದಲ್ಲಿ ತೊಡಕಾಗಿರುವ ಬಾಲ ಕಾರ್ಮಿಕ ಪದ್ಧತಿಯನ್ನು ತೆಗೆದು ಹಾಕಲು ಎಲ್ಲರೂ ಸಂಕಲ್ಪ ಮಾಡಬೇಕು ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಸಂಜಯ್ ಬಿಜ್ಜೂರ್ ಹೇಳಿದರು.

ಜಿಲ್ಲಾಡಳಿತ, ಕಾರ್ಮಿಕ ಇಲಾಖೆ ಮತ್ತು ಬಾಲಕಾರ್ಮಿಕ ಯೋಜನಾ ಸೊಸೈಟಿ ಸಂಯುಕ್ತವಾಗಿ ನಗರದ ಸುವರ್ಣ ಸಂಸ್ಕೃತಿ ಭವನದಲ್ಲಿ ಬಾಲಕಾರ್ಮಿಕ ಕಾಯ್ದೆಯಡಿ ನೇಮಕಗೊಂಡಿರುವ ನಿರೀಕ್ಷಕರಿಗೆ ಶುಕ್ರವಾರ ಹಮ್ಮಿಕೊಂಡಿದ್ದ ಒಂದು ದಿನದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಬಡತನ ಮತ್ತು ಆದಾಯ ಗಳಿಕೆಯ ಕಾರಣದಿಂದಾಗಿ ಈ ಪದ್ಧತಿಯನ್ನು ಪೋಷಕರೇ ಪ್ರೋತ್ಸಾಹಿಸುತ್ತಿರುವುದು ವಿಷಾದದ ಸಂಗತಿ. ಬಾಲ ಕಾರ್ಮಿಕರಾಗಿ ಅಪಾಯಕಾರಿ ಸ್ಥಿತಿಯಲ್ಲಿ ಶ್ರಮಿಸುತ್ತಿರುವ ಮಕ್ಕಳನ್ನು ಶಿಕ್ಷಣದ ಮುಖ್ಯವಾಹಿನಿಗೆ ಕರೆತರುವ ಅಗತ್ಯವಿದೆ. ಮಾನವೀಯ ಮತ್ತು ಭಾವನಾತ್ಮಕ ಸಂಬಂಧದಿಂದಲೇ ಈ ಪದ್ಧತಿಯನ್ನು ಅರ್ಧದಷ್ಟು ತಡೆಗಟ್ಟಬಹುದಾಗಿದೆ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಕೆ. ಶ್ರೀರಂಗಯ್ಯ ಮಾತನಾಡಿ ಬಾಲ ಕಾರ್ಮಿಕರನ್ನು ಗುರುತಿಸಿ, ಸಮರ್ಥ ನ್ಯಾಯ ಒದಗಿಸಲು ಕಾರ್ಮಿಕ ನಿರೀಕ್ಷಕರು ತಾಲ್ಲೂಕುಮಟ್ಟದಲ್ಲಿ ಸಂಘಟಿತರಾಗಿ ಕಾರ್ಯನಿರ್ವಹಿಸಬೇಕು ಎಂದರು.

ಕಾರ್ಮಿಕ ನಿರೀಕ್ಷಕರು ಬಾಲಕಾರ್ಮಿಕ ಕಾಯ್ದೆಯ ನಿಯಮಗಳನ್ನು ಅರಿತು ಕಾರ್ಯ ನಿರ್ವಹಿಸುವುದರ ಜೊತೆಗೆ ಶಿವಮೊಗ್ಗವನ್ನು ಬಾಲ ಕಾರ್ಮಿಕ ಮುಕ್ತ ಜಿಲ್ಲೆಯನ್ನಾಗಿಸಲು ಶ್ರಮಿಸಬೇಕು ಎಂದು ಕರೆ ನೀಡಿದರು.

ಡಿವೈಎಸ್‌ಪಿ ಶೇಖರಪ್ಪ, ಜಂಟಿ ಕಾರ್ಮಿಕ ಆಯುಕ್ತ ಜೆ.ಟಿ. ಜಿಂಕಲಪ್ಪ, ಜಂಟಿ ಕೃಷಿ ನಿರ್ದೇಶಕ ಡಾ.ಶಿವಮೂರ್ತಪ್ಪ, ಹಿಂದುಳಿದ ವರ್ಗಗಳ ಜಿಲ್ಲಾ ಅಧಿಕಾರಿ ವೀರಣ್ಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎನ್. ಹರಿಕುಮಾರ್ ಆಗಮಿಸಿದ್ದರು. ಜಿಲ್ಲಾ ಕಾರ್ಮಿಕ ಅಧಿಕಾರಿ ಎಂ.ಪಿ. ವಿಶ್ವನಾಥ್ ಸ್ವಾಗತಿಸಿದರು. ಯೋಜನಾ ನಿರ್ದೇಶಕಿ ಶಿವಗಾಮಿ ಪ್ರಾಸ್ತಾವಿಕ ಮಾತನಾಡಿದರು. ಮಂಜಪ್ಪ ನಿರೂಪಿಸಿದರು. ಧರ್ಮಪ್ಪ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.