ADVERTISEMENT

ಬಾಳೆ ತೋಟಕ್ಕೆ ಬೆಂಕಿ: ಅಪಾರ ಹಾನಿ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2011, 18:30 IST
Last Updated 13 ಮಾರ್ಚ್ 2011, 18:30 IST

ನಾಪೋಕ್ಲು:  ಮೂರ್ನಾಡು- ವಿರಾಜಪೇಟೆ ನಡುವಿನ ಮೈತಾಡಿ ಗ್ರಾಮ ವ್ಯಾಪ್ತಿಯ ನಾಲ್ಕೇರಿ ಎಂಬಲ್ಲಿ ಭಾನುವಾರ ಮಧ್ಯಾಹ್ನ ಬಾಳೆ ತೋಟಕ್ಕೆ ಆಕಸ್ಮಿಕ ಬೆಂಕಿ ತಗುಲಿ ಅಪಾರ ನಷ್ಟ ಸಂಭವಿಸಿದೆ. ಬಾಳೆ ಗಿಡ  ಹಾಗೂ ಸಿಲ್ವರ್ ಮರಗಳು ಬೆಂಕಿಗೆ ತುತ್ತಾಗಿವೆ.

ಕಂಬೀರಂಡ ರಘು, ಕಳ್ಳೀರ ಬೋಪಣ್ಣ, ಕೇತೀರ ಯತೀಶ್ ಅವರ ತೋಟಗಳು ಬೆಂಕಿಗೆ ಆಹುತಿಯಾದವು. ಬೆಂಕಿ ವ್ಯಾಪಿಸುತ್ತಿದ್ದಂತೆ ಸಾರ್ವಜನಿಕರು ಮಡಿಕೇರಿಯ ಅಗ್ನಿಶಾಮಕ ದಳ ಸಂಪರ್ಕಿಸಿ ಮಾಹಿತಿ ನೀಡಿದರು. ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ತೋಟದ ಉದ್ದಗಲಕ್ಕೆ ವ್ಯಾಪಿಸಿದ್ದ ಬೆಂಕಿಯನ್ನು ಆರಿಸುವಲ್ಲಿ ಯಶಸ್ವಿಯಾದರು. ರೂ. 50 ಸಾವಿರಕ್ಕೂ ಅಧಿಕ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ವರ್ಷದಿಂದ ತೋಟ ರಕ್ಷಣೆ ಮಾಡಿದ್ದ ರೈತರು ಆಕ್ರೊಶಗೊಂಡಿದ್ದು, ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ದೇವಾಲಯದಲ್ಲಿ ಕಳವು: ಕಗ್ಗೋಡ್ಲು ಗ್ರಾಮದ ಭಗವತಿ ದೇವಾಲಯದಲ್ಲಿ ಶನಿವಾರ ರಾತ್ರಿ ಕಳ್ಳತನ ನಡೆದಿದೆ. ದೇವರ  ಪ್ರಭಾವಳಿಯ ಎರಡು ಧ್ವಜ, ಎರಡು ಪತಾಕೆ ಹಾಗೂ ಪಂಚಲೋಹದ ಕೊಡೆ ಸೇರಿದಂತೆ 5 ಸಾವಿರ  ರೂಪಾಯಿ ಮೌಲ್ಯದ ವಸ್ತು ಕಳುವಾಗಿದೆ.

ಅರ್ಚಕರು ದೇವಾಲಯದ ಆಡಳಿತ ಮಂಡಳಿಗೆ ಮಾಹಿತಿ ನೀಡಿ ದೂರು ಸಲ್ಲಿಸಿದ್ದು, ಮಡಿಕೇರಿ  ಗ್ರಾಮಾಂತರ ಪೋಲೀಸರು ದಾಖಲಿಸಿಕೊಂಡಿದ್ದಾರೆ. ಶನಿವಾರ ಸಂಜೆ ಪೂಜೆ ಮುಗಿಸಿದ ಅರ್ಚಕರು 7.30ರ ವೇಳೆಗೆ ಗರ್ಭಗುಡಿ ಹಾಗೂ ಪೌಳಿಯ ಬಾಗಿಲು ಮುಚ್ಚಿ ಮನೆಗೆ ತೆರಳಿದ್ದರು. ಭಾನುವಾರ ಬೆಳಿಗ್ಗೆ ನಿತ್ಯಪೂಜೆಗೆಂದು ದೇವಾಲಯಕ್ಕೆ ಹೋದಾಗ ಪೌಳಿಯ ಹಾಗೂ ಗರ್ಭಗುಡಿಯ ಬಾಗಿಲು ತೆರೆದಿರುವುದು ಕಂಡುಬಂದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.