ADVERTISEMENT

ಬೇಡಿಕೆ ಈಡೇರಿಕೆ ಆಗ್ರಹಿಸಿ ಡಿವೈಎಫ್‌ಐ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2011, 19:10 IST
Last Updated 22 ಫೆಬ್ರುವರಿ 2011, 19:10 IST

ಮಂಡ್ಯ: ಉದ್ಯೋಗಾವಕಾಶ ಸೇರಿದಂತೆ ರಾಜ್ಯ ಸರ್ಕಾರ ಯುವಜನರಿಗೆ ಹೆಚ್ಚಿನ ಒತ್ತು ನೀಡುವುದಕ್ಕೆ ಪೂರಕವಾಗಿ ಬಜೆಟ್ ಮಂಡಿಸಬೇಕು ಎಂದು ಒತ್ತಾಯಿಸಿ ಭಾರತ ಪ್ರಜಾಸ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್‌ಐ) ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಿತು.

ಸಿಲ್ವರ್ ಜ್ಯೂಬಿಲಿ ಪಾರ್ಕ್‌ನಿಂದ ಹೆದ್ದಾರಿ ಮೂಲಕ ಜಿಲ್ಲಾಧಿಕಾರಿಗಳ ಕಚೇರಿವರೆಗೂ ಮೆರವಣಿಗೆ ನಡೆಸಿದ ಅವರು ಅಲ್ಲಿ ಕೆಲಹೊತ್ತು ಧರಣಿ ನಡೆಸಿದರು. ಬಳಿಕ ವಿವಿಧ ಬೇಡಿಕೆಗಳನ್ನು ಒಳಗೊಂಡ ಮನವಿ ಸಲ್ಲಿಸಿದರು.

ಹೊರ ಗುತ್ತಿಗೆ ಪದ್ಧತಿ ರದ್ದುಪಡಿಸಬೇಕು, ನಿವೃತ್ತರ ಮರು ನೇಮಕಾತಿ ನಿಲ್ಲಿಸಬೇಕು; ಸರ್ಕಾರಿ ಸೇವಾ ವಲಯಗಳನ್ನು ವಿಸ್ತರಿಸಬೇಕು, ಖಾಲಿ ಇರುವ ಹುದ್ದೆಗಳನ್ನು ತಕ್ಷಣವೇ ಭರ್ತಿ ಮಾಡಬೇಕು, ಖಾಸಗಿ ವಲಯದಲ್ಲಿಯೂ ಮೀಸಲು ನೀತಿ ಜಾರಿಗೆ ತರಬೇಕು ಎಂದು ಆಗ್ರಹಪಡಿಸಿದರು.

ಜಿಲ್ಲಾ ಘಟಕದ ಅಧ್ಯಕ್ಷ ಭರತರಾಜ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಆರ್.ಕೃಷ್ಣ, ಹೊಂಬಯ್ಯ, ಲಿಂಗರಾಜ ಮೂರ್ತಿ, ಜಿಪಂ ಸದಸ್ಯ ಕುಮಾರ್ ಮತ್ತಿತರರು ಇದ್ದರು.

ಇಂದು ದಸಂಸ ಪ್ರತಿಭಟನೆ: ಜನಗಣತಿಯಲ್ಲಿ ಜಂಗಮರು ’ಬೇಡ ಜಂಗಮರು’ ಎಂದು ಬರೆಸುವ ಕ್ರಮವನ್ನು ವಿರೋಧಿಸಿ ದಲಿತ ಸಂಘರ್ಷ ಸಮಿತಿಯು ಬುಧವಾರ ನಗರದಲ್ಲಿ ಪ್ರತಿಭಟಿಸಲಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.