ADVERTISEMENT

ಬೇಲೇಕೇರಿ ಬಂದರಿನಿಂದ 25 ಕೋಟಿ ಅದಿರು ವಶ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2011, 18:30 IST
Last Updated 8 ಫೆಬ್ರುವರಿ 2011, 18:30 IST

ಅಂಕೋಲಾ: ಇಲ್ಲಿನ ಬೇಲೇಕೇರಿ ಬಂದರು ಪ್ರದೇಶದಲ್ಲಿ ಮಂಗಳವಾರ ಸಂಜೆ ಹಠಾತ್ ದಾಳಿ ನಡೆಸಿದ ಅರಣ್ಯ ಇಲಾಖೆಯ ವಿಶೇಷ ತನಿಖಾಧಿಕಾರಿ ತಾಕತ್‌ಸಿಂಗ್ ರಾಣಾವತ್ ನೇತೃತ್ವದ ಅಧಿಕಾರಿಗಳ ತಂಡ 80 ಸಾವಿರ ಮೆಟ್ರಿಕ್ ಟನ್ ಅದಿರನ್ನು ವಶಪಡಿಸಿಕೊಂಡಿದೆ.

ಅದಿರಿನ ಮೊತ್ತ ಹಿಂದಿನ ಮಾರುಕಟ್ಟೆ ದರದಲ್ಲಿ 25 ಕೋಟಿ ರೂ. ಎಂದು ಅಂದಾಜು ಮಾಡಲಾಗಿದೆ. ಆದರೆ ಹಾಲಿ ಮಾರುಕಟ್ಟೆ ದರದಲ್ಲಿ ಇದು 50 ಕೋಟಿ ರೂ. ಮೀರಬಹುದೆಂದು ಅಧಿಕಾರಿಗಳು ಹೇಳಿದ್ದಾರೆ.

ವಿವರ:ಈ ಹಿಂದೆ ಅಂದರೆ 2010ರ ಮಾರ್ಚ್ 20ರಂದು ಅರಣ್ಯ ಇಲಾಖೆಯ ತನಿಖಾಧಿಕಾರಿಗಳು ಬೇಲೇಕೇರಿಯಿಂದ 200 ಕೋಟಿ ರೂ. ಮೌಲ್ಯದ ಅದಿರು ಇಲ್ಲಿಂದ ಅಕ್ರಮವಾಗಿ ವಿದೇಶಕ್ಕೆ ಸಾಗಿಸಿದ 12 ಅದಿರು ಸಾಗಾಣಿಕಾ ಕಂಪೆನಿಗಳ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದರು.

ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದಿದ್ದ ಈ ಪ್ರಕರಣದ ವಿರುದ್ಧ ಸಾಗಾಣಿಕೆದಾರರು  ನವೆಂಬರ್ 2, 2010 ರಂದು  ತನಿಖೆಗೆ ತಡೆಯಾಜ್ಞೆ ಕೋರಿ ಧಾರವಾಡ ಹೈಕೋರ್ಟ್‌ನಲ್ಲಿ  ರಿಟ್ ಅರ್ಜಿ ಸಲ್ಲಿಸಿದ್ದರು.  ನ್ಯಾಯಾಲಯವು ಜನವರಿ 29, 2011 ರಂದು ಅವರ ಮನವಿಯನ್ನು ತಳ್ಳಿ ಹಾಕಿ ಅರಣ್ಯ ಇಲಾಖೆ ತನಿಖೆಗೆ ಹಸಿರು ನಿಶಾನೆ ನೀಡಿತು.

‘ಈ ಆದೇಶದ ಧೃಡೀಕೃತ ಪ್ರತಿ ದೊರೆತಿಲ್ಲವಾದರೂ, ನ್ಯಾಯಾಲಯದ ಆದೇಶವನ್ನು ವೆಬ್‌ಸೈಟ್ ಮೂಲಕ ಪಡೆದುಕೊಂಡು ಈ ಕಾರ್ಯಾಚರಣೆ ನಡೆಸಲಾಯಿತು’ ಎಂದು ‘ಪ್ರಜಾವಾಣಿ’ ಗೆ ರಾಣಾವತ್ ತಿಳಿಸಿದರು. ಭಾರಿ ಪ್ರಮಾಣದ ಈ ಅದಿರಿನ ವಾರಸುದಾರರ ಕುರಿತು  ಮಾಹಿತಿ ನೀಡಲು ಬಂದರು ಅಧಿಕಾರಿಗಳು ವಿಫಲರಾಗಿದ್ದು, ಅಂಕೋಲಾ ಆರ್‌ಎಫ್‌ಓ ಅಜೀಜ್ ಅವರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗಿದ್ದು ವಶಪಡಿಸಿಕೊಂಡ ಅದಿರಿನ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.