ADVERTISEMENT

ಬ್ಯಾಂಕ್‌ಗಳಿಗೆ ರೈತರ ಮುತ್ತಿಗೆ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2011, 19:30 IST
Last Updated 28 ಅಕ್ಟೋಬರ್ 2011, 19:30 IST

ಶ್ರೀರಂಗಪಟ್ಟಣ: ತಾಲ್ಲೂಕನ್ನು ಸರ್ಕಾರ ಬರ ಪೀಡಿತ ಎಂದು ಘೋಷಿಸಿರುವ ಹಿನ್ನೆಲೆಯಲ್ಲಿ ಬ್ಯಾಂಕ್‌ಗಳು ರೈತರು ಹಾಗೂ ನಿರುದ್ಯೋಗಿ ಯುವ ಜನರಿಗೆ ಅಲ್ಪಾವಧಿ ಸಾಲ ನೀಡಬೇಕು ಎಂದು ಆಗ್ರಹಿಸಿ ರೈತ ಸಂಘದ ಕಾರ್ಯಕರ್ತರು ಪಟ್ಟಣದ ವಿವಿಧ ಬ್ಯಾಂಕ್ ಶಾಖೆಗಳಿಗೆ ಶುಕ್ರವಾರ ಮುತ್ತಿಗೆ ಹಾಕಿ ಆಗ್ರಹಿಸಿದರು.

ಪಟ್ಟಣದ ಕೆನರಾ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಎಸ್‌ಬಿಎಂ, ವಿಶ್ವೇಶ್ವರಯ್ಯ ಬ್ಯಾಂಕ್ ಶಾಖೆಗಳಿಗೆ ತೆರಳಿ ವ್ಯವಸ್ಥಾಪಕರನ್ನು ಭೇಟಿ ಮಾಡಿ ಶೀಘ್ರ ಸಾಲ ವಿತರಿಸುವಂತೆ ಒತ್ತಾಯಿಸಿದರು.

ತಾಲ್ಲೂಕಿನಲ್ಲಿ ಈ ಬಾರಿ ಮಳೆ ಕಡಿಮೆಯಾಗಿದೆ. ಒಣ ಭೂಮಿ ನೆಚ್ಚಿ ವ್ಯವಸಾಯ ಮಾಡಿದ ರೈತರು ನಷ್ಟ ಅನುಭವಿಸಿದ್ದಾರೆ. ಗ್ರಾಮೀಣ ಪ್ರದೇಶದ ಯುವಕ-ಯುವತಿಯರು ಕೆಲಸ ಇಲ್ಲದೆ ನಿರುದ್ಯೋಗಿಗಳಾಗಿದ್ದಾರೆ. ಹಸು, ಕುರಿ, ಕೋಳಿ ಸಾಕಣೆ, ಕರಕುಶಲ ವಸ್ತು ತಯಾರಿಕೆ, ಗುಡಿ ಕೈಗಾರಿಕೆ ಇತರ ಉದ್ದೇಶಗಳಿಗೆ ವಾಣಿಜ್ಯ ಬ್ಯಾಂಕ್ ಸಾಲ ನೀಡಬೇಕು. ಕಂದಾಯ ಇಲಾಖೆ ಹಾಗೂ ಗ್ರಾ.ಪಂ.ಗಳು ಸಾಲ ಅಗತ್ಯ ಇರುವವರ ಪಟ್ಟಿ ತಯಾರಿಸಿ ಬ್ಯಾಂಕ್‌ಗಳಿಗೆ ನೀಡಬೇಕು ಎಂದು ರೈತ ಮುಖಂಡ ಕೆ.ಎಸ್, ನಂಜುಂಡೇಗೌಡ ಆಗ್ರಹಿಸಿದರು.

ನಬಾರ್ಡ್ ಹಾಗೂ ರಿಸರ್ವ್ ಬ್ಯಾಂಕ್‌ನ ನಿಯಮಾವಳಿ ಪ್ರಕಾರ ನಿಗದಿತ ಉದ್ದೇಶಗಳಿಗೆ ಸಾಲ ವಿತರಣೆ ಆಗಬೇಕು ಎಂದು ರೈತ ಸಂಘದ ತಾಲ್ಲೂಕು ಅಧ್ಯಕ್ಷ ಪಿ.ಕೆಂಪೇಗೌಡ, ನಾಗೇಂದ್ರಸ್ವಾಮಿ, ಡಿ.ಎಸ್. ಚಂದ್ರಶೇಖರ್ ಒತ್ತಾಯಿಸಿದರು. ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಪಾಂಡು, ಜಯರಾಮೇಗೌಡ, ಶ್ರೀಕಂಠಯ್ಯ, ಗ್ರಾ.ಪಂ. ಸದಸ್ಯ ದಿನೇಶ್, ನಂಜುಂಡಪ್ಪ, ಕೃಷ್ಣೇಗೌಡ, ಕೊಡಿಯಾಲ ಜವರೇಗೌಡ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.