ADVERTISEMENT

ಭಕ್ತರ ಭಾವನೆಗೆ ಧಕ್ಕೆಆಗದಂತೆ ಮಡೆಮಡೆ ಸ್ನಾನ

​ಪ್ರಜಾವಾಣಿ ವಾರ್ತೆ
Published 9 ಜುಲೈ 2012, 19:30 IST
Last Updated 9 ಜುಲೈ 2012, 19:30 IST

ಸುಬ್ರಹ್ಮಣ್ಯ: `ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಯುವ ಮಡೆ ಸ್ನಾನ ಸೇವೆಯ ಕುರಿತು ಭಕ್ತರ ಅಭಿಪ್ರಾಯ ಸಂಗ್ರಹಿಸಲಾಗಿದೆ. ಸರ್ಕಾರ ಮತ್ತು ದೇವಸ್ಥಾನವು ನಿರ್ಣಯ ಕೈಗೊಳ್ಳಲಿದೆ. ಭಕ್ತರ ಭಾವನೆಗೆ ಧಕ್ಕೆ ಬಾರದಂತೆ ಮಡೆಮಡೆ ಸ್ನಾನ ನಡೆಯಲಿದೆ~ ಎಂದು ಪೇಜಾವರ ಮಠಾಧೀಶರಾದ ವಿಶ್ವೇಶ ತೀರ್ಥ ಸ್ವಾಮೀಜಿ ಹೇಳಿದರು.

ಸೋಮವಾರ ಸುಬ್ರಹ್ಮಣ್ಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರಿಗಳು, `ಇಲ್ಲಿ ಯಾವುದೇ ನಿರ್ಣಯಗಳನ್ನು ತೆಗೆದುಕೊಳ್ಳುವುದಿಲ್ಲ. ಜನರಲ್ಲಿರುವ ಗೊಂದಲದ ಬಗ್ಗೆ ಸರಿಯಾದ ತಿಳಿವಳಿಕೆ ಮೂಡಿಸಬೇಕು. ಏನಾದರೂ ಸಂಶಯವಿದ್ದರೆ ಪರಿಹಾರ ಮಾಡಬೇಕು. ಮುಂದೆ ಏನು ಮಾಡಬೇಕೆಂದು ದೇವಸ್ಥಾನ ಹಾಗೂ ಸರ್ಕಾರ ತೀರ್ಮಾನ ಕೈಗೊಳ್ಳಲು ಅನುಕೂಲವಾಗಲು ಈ ಸಂವಾದ ಸಹಕಾರಿ~ ಎಂದರು.

`ಮಡೆಮಡೆ ಸ್ನಾನ ಬೇಕು ಎಂದು ಹಟ ಮಾಡುವುದರಿಂದ ಧಾರ್ಮಿಕ ಲಾಭವಿಲ್ಲ. ಇದರಿಂದ ಜಾತಿಯ ಸಾಮರಸ್ಯಕ್ಕೆ ಭಂಗ ಉಂಟಾಗುತ್ತದೆ. ಈಗ ಜನಜಾಗೃತಿ ಉಂಟಾಗಿದ್ದು ಜನರ ಅಭಿಪ್ರಾಯಕ್ಕೆ ಅವಕಾಶ ನೀಡುವುದು ಮುಖ್ಯ. ಇಂದಿನ ಸಭೆಯಲ್ಲಿ ಪ್ರತಿಯೊಬ್ಬ ಭಕ್ತರ ಅಭಿಪ್ರಾಯಕ್ಕೂ ಮನ್ನಣೆ ನೀಡಲಾಗಿದೆ~ ಎಂದರು.

`ಬ್ರಾಹ್ಮಣರು ಉಂಡ ಎಂಜಲ ಎಲೆಯ ಬದಲು, ಸುಬ್ರಹ್ಮಣ್ಯ ದೇವರ ಪ್ರಸಾದವನ್ನು ಬಾಳೆ ಎಲೆಯಲ್ಲಿ ಬಡಿಸಿ ನಾವು ಕಾಮಧೇನು ಎಂದು ಪೂಜಿಸುವ ಗೋಮಾತೆ ತಿಂದ ಬಳಿಕ ಭಕ್ತರು ಅದರ ಮೇಲೆ ಉರುಳು ಸೇವೆ ಮಾಡುವುದರಿಂದ ಸಮಾಜದಲ್ಲಿ ಸಾಮರಸ್ಯ ಉಳಿಸಬಹುದು ಎಂಬುದು ಸಾರ್ವತ್ರಿಕ ಅಭಿಪ್ರಾಯವಾಗಿದೆ. ಈ ಬಗ್ಗೆ ಹೆಚ್ಚಿನವರು ಸಹಮತ ವ್ಯಕ್ತಪಡಿಸಿದ್ದಾರೆ~ ಎಂದರು.

`ಸುಬ್ರಹ್ಮಣ್ಯ ದೇವಳದ ಮೂಲ ನಿವಾಸಿಗಳಾದ ಮಲೆಕುಡಿಯ ಜನಾಂಗದವರೊಂದಿಗೆ ಮಾತುಕತೆ ನಡೆಸಿದ್ದೇನೆ. ಮಡೆಮಡೆ ಸ್ನಾನದ ಬದಲಾವಣೆಗೆ ಅವರ ಸಮ್ಮತಿ ಇದೆ. ಆದರೆ, ಬದಲಾವಣೆಯಿಂದ ಆ ಜನಾಂಗಕ್ಕೆ ಏನಾದರೂ ತೊಂದರೆ ಆದೀತೆ ಎಂಬ ಸಂಶಯವೂ ಅವರಲ್ಲಿದೆ. ಅವರ ಸಂಶಯ ನಿವಾರಿಸಲು ಮುಂದಿನ ದಿನಗಳಲ್ಲಿ ಚಿಂತನೆ ನಡೆಸಿ ಅವರ ಸಂಶಯ ಪರಿಹರಿಸಲಾಗುವುದು~ ಎಂದರು.

`ಧಾರ್ಮಿಕ ನಂಬಿಕೆ ವಿಚಾರದಲ್ಲಿ ಸರ್ಕಾರದ ಹಸ್ತಕ್ಷೇಪ ಸರಿಯಲ್ಲ. ಜನರ ಭಾವನೆಗೆ ಧಕ್ಕೆಯಾಗದಂತೆ ಸಮಸ್ಯೆಗೆ ಪರಿಹಾರ ಸೂತ್ರ ಕಂಡು ಹಿಡಿಯಬೇಕು ಎಂದು ಸಲಹೆ ನೀಡಿದರು.ಗೋಷ್ಠಿಯಲ್ಲಿ ಕಲ್ಲಡ್ಕ ಪ್ರಭಾಕರ ಭಟ್, ರಾಜ್ಯ ಹಿಂದೂ ಧಾರ್ಮಿಕ ಪರಿಷತ್‌ನ ಸದಸ್ಯ ಎಂ.ಬಿ.ಪುರಾಣಿಕ್, ನ.ಸೀತಾರಾಮ ಉಪಸ್ಥಿತದ್ದರು.

ಇದಕ್ಕೂ ಮೊದಲು ವಿಶ್ವೇಶತೀರ್ಥ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಚಿಂತನೆ ಹಾಗೂ ಸಂವಾದದಲ್ಲಿ ಧಾರ್ಮಿಕ ಮುಖಂಡರು, ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರು, ಸದಸ್ಯರು, ಕಾರ್ಯ ನಿರ್ವಹಣಾಧಿಕಾರಿಗಳು, ಭಕ್ತರು, ಸಂಘ, ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.