ADVERTISEMENT

ಭಾರತೀಯ ಸಂಸ್ಕೃತಿಗೆ ಪ್ರಾಕೃತವೇ ಮೂಲ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2012, 19:30 IST
Last Updated 19 ಆಗಸ್ಟ್ 2012, 19:30 IST

ಚನ್ನರಾಯಪಟ್ಟಣ: `ಪ್ರಾಕೃತ ಹಾಗೂ ಸಂಸ್ಕೃತ ಭಾರತೀಯ ಸಾಹಿತ್ಯದ ಜೀವಾಳ~ ಎಂದು ದೆಹಲಿಯ ಭೋಗಿಲಾಲ್ ಲೆಹರ್‌ಚಂದ್ ಸಂಸ್ಥೆಯ ನಿರ್ದೇಶಕ ಡಾ. ಪೂಲ್‌ಚಂದ್ ಜೈನ್ ಪ್ರೇಮಿ ಅಭಿಪ್ರಾಯಪಟ್ಟರು.

ಶ್ರವಣಬೆಳಗೊಳದ ಬಾಹುಬಲಿ ಪ್ರಾಕೃತ ವಿದ್ಯಾಪೀಠದಲ್ಲಿ ಭಾನುವಾರ ಏರ್ಪಡಿಸಿದ್ದ ಏಳನೇ ಘಟಿಕೋತ್ಸವದಲ್ಲಿ ಅವರು ಮಾತನಾಡಿದರು.

ಪ್ರಾಚೀನ ಭಾರತದ ವಿಜ್ಞಾನ, ತತ್ವಜ್ಞಾನ, ಸಂಸ್ಕೃತಿ, ಇತಿಹಾಸ, ಪರಂಪರೆಯ ಜ್ಞಾನ ವೃದ್ಧಿಸಿಕೊಳ್ಳಲು ಪ್ರಾಕೃತ ಭಾಷೆ ಮತ್ತು ಸಾಹಿತ್ಯದ ಅಧ್ಯಯನದ ಅವಶ್ಯ. ಇದರ ಅಧ್ಯಯನವಿಲ್ಲದೇ ಪರಿಪೂರ್ಣವಾಗಿ ಭಾರತೀಯ ಸಾಹಿತ್ಯ, ಸಂಸ್ಕೃತಿಯನ್ನು ಅಧ್ಯಯನ ಮಾಡಲು ಸಾಧ್ಯವಿಲ್ಲ ಎಂದರು.

ಪ್ರಾಕೃತ ಭಾರತೀಯರ ಜೀವನ, ಸಂಸ್ಕೃತಿಯ ಮೂಲಭಾಷೆಯಾಗಿದೆ. ಈ ಭಾಷೆಯ ಸಾಹಿತ್ಯದಲ್ಲಿ ಮಾನವನ ಸ್ವಾಭಾವಿಕವಾದ  ವೃತ್ತಿಗಳು, ನೈಸರ್ಗಿಕ ಗುಣಗಳು ಸರಳವಾಗಿ ಅಭಿವ್ಯಕ್ತಿಗೊಂಡಿವೆ. ಮಹಾವೀರ, ಬುದ್ಧ ಅವರಂಥ ಮಹಾನ್ ಪುರುಷರು ಇದೇ ಭಾಷೆಯಲ್ಲಿ ಸಂದೇಶ ಸಾರಿದ್ದಾರೆ ಎಂದು ಹೇಳಿದರು.

ಪ್ರಾಚೀನ, ಆಧುನಿಕ ಭಾರತೀಯ ಭಾಷೆಗಳ ವಿಕಾಸಕ್ಕೆ ರಾಜ್ಯ ಸರ್ಕಾರಗಳು ಅನೇಕ ವಿಶ್ವವಿದ್ಯಾನಿಲಯಗಳನ್ನು ಸ್ಥಾಪಿಸಿವೆ. ಆದರೆ ಇದುವರೆಗೆ ಪ್ರಾಕೃತ ಭಾಷೆಯ ಪರಿಷತ್ತು ಅಥವಾ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಲು ಆಗಿಲ್ಲ. ಪ್ರಾಕೃತ ಭಾಷೆಯನ್ನು ಪುನಃ ಪ್ರತಿಷ್ಠಾಪಿಸಬೇಕು. ಇಲ್ಲದಿದ್ದರೆ ಮುಂದಿನ ಪೀಳಿಗೆಯವರು ನಮ್ಮನ್ನು ಕ್ಷಮಿಸುವುದಿಲ್ಲ ಎಂದರು.

ಬಾಹುಬಲಿ ಪ್ರಾಕೃತ ವಿದ್ಯಾಪೀಠದ ಕಾರ್ಯಾಧ್ಯಕ್ಷ ಎಂ.ಜೆ.ಇಂದ್ರಕುಮಾರ್, ಮೈಸೂರು ವಿಶ್ವವಿದ್ಯಾನಿಲಯದ ಜೈನಶಾಸ್ತ್ರ ವಿಭಾಗದ ಮುಖ್ಯಸ್ಥೆ ಪ್ರೊ. ಪದ್ಮಾಶೇಖರ್, ಸಂಸ್ಥೆಯ ನಿರ್ದೇಶಕ ಪ್ರೊ.ಜೀವಂಧರಕುಮಾರ್ ಹೋತಪೇಟಿ, ರಾಜ್ಯ ಜೈನ ಸಮಾಜದ ಅಧ್ಯಕ್ಷ ಎಸ್.ಜಿತೇಂದ್ರಕುಮಾರ್, ಪ್ರೊ. ಬಿ.ಎಸ್.ಸಣ್ಣಯ್ಯ ಇದ್ದರು.

ಪ್ರಾಕೃತ ಪರೀಕ್ಷಾಂಗ ವಿಭಾಗದ ಮುಖ್ಯಸ್ಥ ಡಾ.ಎ.ಎಂ.ಜಯಚಂದ್ರ ಸ್ವಾಗತಿಸಿ, ಮಂಜಯ್ಯ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.