ತಾಂಬಾ (ತಾ.ಇಂಡಿ): ಇದೊಂದು ಭಾವೈಕ್ಯದ ಅಪರೂಪದ ಹಬ್ಬ. ಒಂದು ತಿಂಗಳ ಕಾಲ ಉಪವಾಸ ವ್ರತ ಕೈಗೊಂಡಿದ್ದ ಭಕ್ತರು ದೇವಸ್ಥಾನದ ಆವರಣದಲ್ಲಿ ಒಟ್ಟಾಗಿ ಸೇರಿ ಸಹಭೋಜನ ಸವಿದರು. ಜಾತಿ-ಮತ-ಪಂತ ಎಂಬ ತಾರತಮ್ಯ ಇಲ್ಲಿ ಇರಲಿಲ್ಲ. ಇದ್ದದ್ದು ಪ್ರಾಂಜಲ ಮನಸ್ಸು ಮತ್ತು ಪವಿತ್ರ ಭಕ್ತಿ ಮಾತ್ರ.
ಈ ಅಪರೂಪದ ಕಾರ್ಯಕ್ರಮ ನಡೆದಿದ್ದು ಇಲ್ಲಿಯ ಗವಿಸಿದ್ದೇಶ್ವರ ಮುಕ್ತಿ ಮಂದಿರದಲ್ಲಿ. ದೀಪಾವಳಿಯ ನರಕ ಚತುರ್ದಶಿ ಸಮಯದಲ್ಲಿ. ಮುಸ್ಲಿಂ ಬಾಂಧವರು ಪವಿತ್ರ ರಮ್ಜಾನ್ ಮಾಸದಲ್ಲಿ ಉಪವಾಸ ವ್ರತ ಆಚರಿಸುವುದು ಎಲ್ಲರಿಗೂ ಗೊತ್ತಿರುವ ಸಂಗತಿ.
ತಾಂಬಾ ಗ್ರಾಮದ ಗವಿಸಿದ್ದೇಶ್ವರ ದೇವರ ಭಕ್ತರು ದೀಪಾವಳಿಗೂ ಮುನ್ನ ಒಂದು ತಿಂಗಳಿನಿಂದ ಉಪವಾಸ ವ್ರತ ಕೈಗೊಂಡಿದ್ದರು. ಗ್ರಾಮ ಮತ್ತು ಸುತ್ತಲಿನ ಗ್ರಾಮಗಳ ಭಕ್ತರು ಪ್ರತಿ ವರ್ಷವೂ ಹೀಗೆ ಹರಕೆ ಹೊತ್ತು ಉಪವಾಸ ವ್ರತ ಆಚರಿಸುವುದು ಸಂಪ್ರದಾಯ.
ಹಿಂದೂ ಮತ್ತು ಮುಸ್ಲಿಂ ಬಾಂಧವರು ಮಹಾನವಮಿ ಅಮಾವಾಸ್ಯೆಯಿಂದ ಆಚರಿಸಿಕೊಂಡು ಬಂದಿದ್ದ ಉಪವಾಸ ವ್ರತವನ್ನು ನರಕಚತುರ್ದಶಿಯ ದಿನವಾದ ಸೋಮವಾರ ಕೊನೆ ಗೊಳಿಸಿದರು. ಒಂದು ತಿಂಗಳ ಅವಧಿಯಲ್ಲಿ ಈ ಭಕ್ತರು ಒಂದೇ ಹೊತ್ತು ಊಟ ಮಾಡುತ್ತಿದ್ದರು.
ತಾಂಬಾ, ತೆನಿಹಳ್ಳಿ, ಗಂಗನಳ್ಳಿ, ಮೆಟಗುಡ್ಡ, ಬತಗುಣಕಿ, ಹೊನ್ನಳ್ಳಿ, ಇಂಗಳೇಶ್ವರ, ದಿಂಡವಾರ, ಕಡ್ಲೇವಾಡ, ದೇವರ ಹಿಪ್ಪರಗಿ, ಮನಗೂಳಿ, ಚಿಕ್ಕರೂಗಿ, ಅಫಜಲಪೂರ ಸೇರಿದಂತೆ ಹಲವಾರು ಗ್ರಾಮಗಳ ಭಕ್ತರು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.
ತಮ್ಮ ಮನೆಯಿಂದ ಕಟ್ಟಿಕೊಂಡು ಬಂದಿದ್ದ ಬಾಳೆಹಣ್ಣು, ಕಡಬು, ಜಿಲೇಬಿ, ಫೇಡಾ, ಖರ್ಜೂರ, ತುಪ್ಪ, ಅಂಬಲಿ ಮತ್ತಿತರ ಸಿಹಿ ತಿನಿಸುಗಳನ್ನು ಒಂದೆಡೆ ಸೇರಿಸಿ ದೇವರಿಗೆ ಅರ್ಪಿಸಿದರು. ಆ ನಂತರ ಎಲ್ಲರೂ ಸಹಭೋಜನ ಸವಿದು ತಿಂಗಳ ಪರ್ಯಂತ ನಡೆಸಿಕೊಂಡು ಬಂದಿದ್ದ ಉಪವಾಸ ವ್ರತ ಕೊನೆಗೊಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.