ADVERTISEMENT

ಮಗುವಿನ ಮೇಲೆ ಬೀದಿ ನಾಯಿ ದಾಳಿ

​ಪ್ರಜಾವಾಣಿ ವಾರ್ತೆ
Published 19 ಜನವರಿ 2012, 19:30 IST
Last Updated 19 ಜನವರಿ 2012, 19:30 IST

ಚಿತ್ರದುರ್ಗ: ಮಗುವಿನ ಮೇಲೆ ಬೀದಿನಾಯಿಯೊಂದು ದಾಳಿ ನಡೆಸಿದ್ದರಿಂದ ಮಗು ತೀವ್ರವಾಗಿ ಗಾಯಗೊಂಡಿರುವ ಘಟನೆ ಇಲ್ಲಿನ ವಿದ್ಯಾನಗರ ಬಡಾವಣೆಯಲ್ಲಿ ಗುರುವಾರ ಬೆಳಿಗ್ಗೆ ನಡೆದಿದೆ.

ಮೀನಾಜ್ (2) ಗಾಯಗೊಂಡ ಮಗು. ಬೆಳಿಗ್ಗೆ 10 ಗಂಟೆ ಸುಮಾರಿಗೆ ಬೀದಿಯಲ್ಲಿ ಆಟವಾಡುತ್ತಿದ್ದಾಗ ನಾಯಿಯೊಂದು ದಾಳಿ ನಡೆಸಿ ಮುಖಕ್ಕೆ ತೀವ್ರವಾಗಿ ಕಚ್ಚಿದೆ. ಇದರಿಂದ ರಕ್ತದ ಮಡುವಿನಲ್ಲಿ ಮುಳುಗಿದ ಮಗು ಜೋರಾಗಿ ಅಳುವುದನ್ನು ಕೇಳಿ ಪೋಷಕರು ಆಗಮಿಸಿ, ತಕ್ಷಣ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಆದರೆ, ಜಿಲ್ಲಾ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ ವೈದ್ಯರೇ ಇಲ್ಲದಿದ್ದರಿಂದ ತಕ್ಷಣಕ್ಕೆ ಚಿಕಿತ್ಸೆ ದೊರೆಯಲಿಲ್ಲ. ಚಿಕಿತ್ಸೆ ನೀಡಲು ವಿಳಂಬ ಮಾಡಿರುವುದನ್ನು ಖಂಡಿಸಿ ಸಾರ್ವಜನಿಕರು ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆಗೆ ಮುಂದಾದರು. ಕೆಲ ಹೊತ್ತಿನ ನಂತರ ವೈದ್ಯರು ಆಗಮಿಸಿ ಚಿಕಿತ್ಸೆ ನೀಡಿದರು.

`ಬಡಾವಣೆಯಲ್ಲಿ ಬೀದಿನಾಯಿ ಹಾವಳಿ ಹೆಚ್ಚಾಗಿದ್ದು, ಸಂಚರಿಸುವುದೇ ಕಷ್ಟವಾಗುತ್ತಿದೆ. ಮಕ್ಕಳನ್ನು ಹೊರಗೆ ಬಿಡಲು ಹೆದರಿಕೆಯಾಗುತ್ತಿದೆ~ ಎಂದು ಗಾಯಗೊಂಡ ಮಗುವಿನ ದೊಡ್ಡಮ್ಮ ಶಹನಾಜ್ ದೂರಿದರು.

ವಿದ್ಯಾನಗರ ಬಡಾವಣೆ ಮೆದೇಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಸೇರುತ್ತದೆ. ಆದ್ದರಿಂದ ನಗರಸಭೆ ಮತ್ತು ಮೆದೇಹಳ್ಳಿ ಗ್ರಾ.ಪಂ. ಜಂಟಿಯಾಗಿ ಬೀದಿನಾಯಿಗಳ ಹಾವಳಿಯನ್ನು ನಿಯಂತ್ರಿಸಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.

`ಈಗಾಗಲೇ ಸುಮಾರು ಒಂದು ಸಾವಿರ ಬೀದಿನಾಯಿಗಳನ್ನು ಹಿಡಿಯಲಾಗಿದೆ. ಮುಂದಿನ ದಿನಗಳಲ್ಲಿ ಕೇರಳದ ತಂಡವನ್ನು ಕರೆಯಿಸಿಕೊಂಡು ನಗರದಲ್ಲಿನ ಬೀದಿನಾಯಿಗಳ ಹಾವಳಿಗೆ ಕಡಿವಾಣ ಹಾಕಲಾಗುವುದು. ಈ ಬಗ್ಗೆ ಆತಂಕ ಬೇಡ~ ಎಂದು ಪೌರಾಯುಕ್ತ ವಿಜಯಕುಮಾರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.