ADVERTISEMENT

ಮತ್ತೆ ಸಾಗರ ದಾಟಿದ ವಿಜಾಪುರ ದ್ರಾಕ್ಷಿ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2012, 19:30 IST
Last Updated 12 ಫೆಬ್ರುವರಿ 2012, 19:30 IST

ವಿಜಾಪುರ: ಇಲ್ಲಿಯ ದ್ರಾಕ್ಷಿ ಮತ್ತೆ ವಿದೇಶಕ್ಕೆ ಲಗ್ಗೆ ಇಟ್ಟಿದೆ. ಹಲವು ವರ್ಷಗಳಿಂದ ಸ್ಥಗಿತಗೊಂಡಿದ್ದ ದ್ರಾಕ್ಷಿ ರಫ್ತು ವಹಿವಾಟು ಪುನರಾರಂಭಗೊಂಡಿದೆ.

ಮಾಜಿ ಶಾಸಕ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಶಿವಾನಂದ ಪಾಟೀಲರು ಇಲ್ಲಿಯ ಬಬಲೇಶ್ವರ ನಾಕಾ ಹತ್ತಿರ ಇರುವ ತಮ್ಮ ತೋಟದಲ್ಲಿ `ಶರದ್ ಸೀಡ್‌ಲೆಸ್~ ತಳಿಯ ದ್ರಾಕ್ಷಿ ಬೆಳೆದು ವಿದೇಶಕ್ಕೆ ರಫ್ತು ಮಾಡುತ್ತಿದ್ದು, ಈಗಾಗಲೆ ಆರು ಟನ್ ದ್ರಾಕ್ಷಿ ರಫ್ತಾಗಿದೆ.

`ಭಾರತೀಯ ಗ್ರಾಹಕರು ಸಿಹಿ ಸಿಹಿಯಾದ ದ್ರಾಕ್ಷಿ ಕೇಳಿದರೆ ವಿದೇಶಿ ಗ್ರಾಹಕರಿಗೆ ಅಷ್ಟೇನೂ ಸಿಹಿಯಾಗಿರದ, ಹುಳಿ ದ್ರಾಕ್ಷಿಯೇ ಅಚ್ಚು ಮೆಚ್ಚು. ಅದರ ಬಣ್ಣ ಕಡು ಹಸಿರಾಗಿರಬೇಕು. ಕಾಯಿ ಗೋಲಾಕಾರವಾಗಿದ್ದು,  22ರಿಂದ 24 ಮಿಲಿ ಮೀಟರ್ ವ್ಯಾಸ ಹೊಂದಿರಬೇಕು. ಸಕ್ಕರೆ ಪ್ರಮಾಣ ಶೇ.18ಕ್ಕಿಂತ ಹೆಚ್ಚಾಗಿರಬಾರದು. ಔಷಧಿ ಬಳಕೆ ಆಗಿರಬಾರದು. ಇದು ವಿದೇಶಿಯರ ಕಟ್ಟಳೆ~ ಎನ್ನುತ್ತಾರೆ ಶಿವಾನಂದ.

`ನಮ್ಮ 12 ಎಕರೆ ತೋಟದಲ್ಲಿ ಮೂರು ಎಕರೆಯಲ್ಲಿ ಈ ರಫ್ತು ಗುಣಮಟ್ಟದ ದ್ರಾಕ್ಷಿ ಬೆಳೆದಿದ್ದೇವೆ. ಒಂದು ಬಳ್ಳಿಯಿಂದ 10ರಿಂದ 15 ಕೆ.ಜಿ. ಇಳುವರಿ ಬರುಷ್ಟು ಮಾತ್ರ ಗೊನೆಗಳನ್ನು ಬಿಟ್ಟಿದ್ದೆವು. ಪ್ರತಿ ಗೊನೆಯಲ್ಲಿ 125ರಿಂದ 140 ಕಾಯಿಗಳು ಇರುವಂತೆ ಹಾಗೂ ಒಂದು ಗೊನೆ ಒಂದು ಕೆ.ಜಿ.ಯಷ್ಟು ಮಾತ್ರ ತೂಕ ಇರುವಂತೆ ನೋಡಿಕೊಂಡಿದ್ದೇವೆ. ಹೀಗಾಗಿ ಗುಣಮಟ್ಟ ಮತ್ತು ಕಾಯಿಯ ಗಾತ್ರ ಕಾಪಾಡಲು ಸಾಧ್ಯವಾಗಿದೆ~ ಎಂದರು.

`ಜಿಲ್ಲೆಯಲ್ಲಿ 3500 ಕ್ಕಿಂತ ಹೆಚ್ಚು ರೈತರು 7200 ಹೆಕ್ಟೇರ್ ಪ್ರದೇಶದಲ್ಲಿ ದ್ರಾಕ್ಷಿ ಬೆಳೆಯುತ್ತಿದ್ದಾರೆ. 1500 ಹೆಕ್ಟೇರ್‌ಗೂ ಹೆಚ್ಚು ಪ್ರದೇಶದಲ್ಲಿ ರಫ್ತು ಗುಣಮಟ್ಟದ ದ್ರಾಕ್ಷಿ ಬೆಳೆಯಲಾಗುತ್ತಿತ್ತು. ಕೊಯ್ಲು ನಂತರದ ತಂತ್ರಜ್ಞಾನದ ಕೊರತೆ, ಸಂಸ್ಕರಣೆ, ಸಾಗಾಣಿಕೆಯ ತೊಂದರೆ ಹಾಗೂ ಗುಣಮಟ್ಟದ ಸಮಸ್ಯೆಯಿಂದ ವಿದೇಶಗಳಲ್ಲಿ ದ್ರಾಕ್ಷಿ ತಿರಸ್ಕಾರ ಆಗುವ ಅಪಾಯದಿಂದ ಬಹುತೇಕ ರೈತರು ರಫ್ತು ಗುಣಮಟ್ಟದ ದ್ರಾಕ್ಷಿ ಬೆಳೆಯುವುದರಿಂದ ಹಿಂದೆ ಸರಿದರು. ಹೀಗಾಗಿ 5ವರ್ಷ ಇಲ್ಲಿಂದ ದ್ರಾಕ್ಷಿ ರಫ್ತು ಸ್ಥಗಿತಗೊಂಡಿತ್ತು~ ಎನ್ನುತ್ತಾರೆ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು.

`ಮಹಾರಾಷ್ಟ್ರ ರೈತರು ಮಹಾ ಗ್ರೇಪ್ಸ್ ಹೆಸರಿನಲ್ಲಿ ಸಂಘ ರಚಿಸಿಕೊಂಡು ಅದರ ಮೂಲಕ ವಿದೇಶಗಳಿಗೆ ದ್ರಾಕ್ಷಿ ರಫ್ತು ಮಾಡುತ್ತಾರೆ. ಆದರೆ, ನಮ್ಮಲ್ಲಿ ಅಂಥ ಸಂಘಗಳಿಲ್ಲ. ಏಜೆಂಟರ ಮೂಲಕ ರಫ್ತು ಮಾಡಿದ್ದೇವೆ. ನಮ್ಮ ದ್ರಾಕ್ಷಿಗೆ ವಿದೇಶಗಳಲ್ಲಿ ಕೆ.ಜಿ.ಗೆ 250 ರೂಪಾಯಿಗಿಂತ ಹೆಚ್ಚು ಬೆಲೆ ಇದೆ. ನಮ್ಮ ತೋಟದಲ್ಲಿ ಪ್ರತಿ ಕೆ.ಜಿ.ಗೆ 60ರಿಂದ 80 ರೂಪಾಯಿ ಕೊಟ್ಟು ಖರೀದಿಸುವ ಈ ಏಜೆಂಟರು ಅಧಿಕ ಲಾಭ ಮಾಡಿಕೊಳ್ಳುತ್ತಾರೆ. ಚಿಲ್ಲರೆ ಮಾರುಕಟ್ಟೆ ಪ್ರವೇಶಿಸಿರುವ ಬಹುರಾಷ್ಟ್ರೀಯ ಕಂಪೆನಿಯವರು ನಮ್ಮ ದ್ರಾಕ್ಷಿಯನ್ನು ತಮ್ಮ ಬ್ರಾಂಡ್‌ನಲ್ಲಿ ವಿದೇಶದಲ್ಲಿ ಮಾರಾಟ ಮಾಡುತ್ತಾರೆ~ ಎನ್ನುವುದು ಅವರ ವಿವರಣೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.