ADVERTISEMENT

ಮರಳು ಅಕ್ರಮ ದಂದೆ: ಕ್ರಮಕ್ಕೆ ಮನವಿ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2011, 19:30 IST
Last Updated 20 ಮಾರ್ಚ್ 2011, 19:30 IST

ಕನಕಪುರ: ತಾಲ್ಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಮರಳು ಫಿಲ್ಟರ್ ದಂದೆಗೆ ಸಂಪೂರ್ಣ ಕಡಿವಾಣ ಹಾಕವಂತೆ ಒತ್ತಾಯಿಸಿ ಜಯಕರ್ನಾಟಕ ಸಂಘಟನೆ ಸೇರಿದಂತೆ ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳು ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಜಯಕರ್ನಾಟಕ ಸಂಘಟನೆ ರಾಜ್ಯ ಘಟಕದ ಅಧ್ಯಕ್ಷ ಕುಮಾರಸ್ವಾಮಿ ಮಾತನಾಡಿ, ತಾಲ್ಲೂಕಿನ ಪ್ರಮುಖ ಕೆರೆಗಳಲ್ಲಿ ಅಕ್ರಮವಾಗಿ ಮರಳು ಫಿಲ್ಟರ್ ದಂದೆ ನಡೆಯುತ್ತಿದೆ. ಇದರಿಂದ ಸುತ್ತಲಿನ ಪರಿಸರ ನಾಶಗೊಳ್ಳುತ್ತಿದೆ. ಇದಕ್ಕೆ ರಾಜಕಾರಣಿಗಳು ಕುಮ್ಮಕ್ಕು ನೀಡುತ್ತಿದ್ದಾರೆ. ಕಂದಾಯ ಅಧಿಕಾರಿಗಳೂ ಪರೋಕ್ಷವಾಗಿ ಸಹಕರಿಸುತ್ತಿದ್ದಾರೆ ಎಂದು ಆರೋಪಿಸಿದರು.

ರಾಜಾರೋಷವಾಗಿ ಹಗಲು ವೇಳೆಯಲ್ಲಿಯೇ ಮರಳು ಅಕ್ರಮ ಗಣಿಗಾರಿಕೆ ನಡೆಯುತ್ತಿದೆ. ಪ್ರತಿದಿನ 300 ಲಾರಿಗಳು ಮರಳನ್ನು ಅಕ್ರಮವಾಗಿ ಸಾಗಿಸುತ್ತಿವೆ. ಇದರಿಂದಾಗಿ ತಾಲ್ಲೂಕಿನ ಅಮೂಲ್ಯ ಖನಿಜ ಸಂಪತ್ತು ಲೂಟಿಯಾಗುತ್ತಿದೆ. ಗಣಿಗಾರಿಕೆಯಿಂದಾಗಿ ಸರ್ಕಾರಿ ಗೋಮಾಳ, ಕೆರೆ, ಅರಣ್ಯ ಪ್ರದೇಶದಲ್ಲಿ ಆಳವಾದ ಗುಂಡಿಗಳು ಬಿದ್ದಿವೆ. ಆದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ವಿವರಿಸಿದರು.

ಮರಳು ಸಾಗಿಸುವ ಲಾರಿಗಳು ಮಿತಿಮೀರಿ ಮರಳನ್ನು ತುಂಬಿಕೊಂಡು ಹೋಗುವುದರಿಂದ ರಸ್ತೆಗಳು ಹಾಳಾಗುತ್ತಿವೆ. ಕೆರೆ ಆಜುಬಾಜುಗಳಲ್ಲಿ ಇರುವ ಜಮೀನಿನಲ್ಲಿ ರೈತರು ಬೆಳೆದಿರು ರೇಷ್ಮೆ, ತೆಂಗು ಹಾಗೂ ಮತ್ತಿತರ ಬೆಳೆಗಳು ದೂಳಿನಿಂದ ಹಾಳಾಗುತ್ತಿವೆ. ಜೊತೆಗೆ ಈ ಭಾಗದಲ್ಲಿ ಅಂತರ್ಜಲ ಕುಸಿಯುತ್ತಿದ್ದು ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಈ ಎಲ್ಲ ಅಂಶಗಳು ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿವೆ ಎಂದರು.
 

ಮರಳು ಗಣಿಗಾರಿಕೆ ವಿರೋಧಿಸಿ ರೈತರ ದೂರು ನೀಡಲು ಪೊಲೀಸ್ ಠಾಣೆಗೆ ಹೋದರೆ ಅವರ ವಿರುದ್ಧವೇ ಮತ್ತೊಂದು ದೂರು ದಾಖಲಿಸಿ ತೊಂದರೆ ನೀಡುತ್ತಿದ್ದಾರೆ. ಅಕ್ರಮ ಮರಳು ದಂದೆ ಯಾವುದೇ ಒತ್ತಡಕ್ಕೆ ಮಣಿಯದೆ ಸಂಪೂರ್ಣ ತಡೆಗಟ್ಟಬೇಕು. ಮರಳು ದಂದೆಕೋರರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ತಹಶೀಲ್ದಾರ್ ಪ್ರಜ್ಞಾ ಅವರು ಮನವಿ ಸ್ವೀಕರಿಸಿ ಮಾತನಾಡಿ, ಅಕ್ರಮ ಮರಳು ದಂದೆಗೆ ಕಡಿವಾಣ ಹಾಕಲು ಸರ್ಕಾರ ಗೂಂಡಾ ಕಾಯ್ದೆಜಾರಿ ಮಾಡಿದೆ. ಈಗಾಗಲೇ ಅಕ್ರಮ ಅಡ್ಡೆಗಳ ಮೇಲೆ ದಾಳಿ ನಡೆಸಿ, ಯಂತ್ರೋಪಕರಣಗಳನ್ನು ವಶಪಡಿಸಿಕೊಂಡು, ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದರು.

ಜಿಲ್ಲಾ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಸಂಪತ್‌ಕುಮಾರ್, ತಾಲ್ಲೂಕು ಅಧ್ಯಕ್ಷ ಪುರದಯ್ಯ, ಮುಖಂಡ ಕೆ.ಬಿ.ನಾಗರಾಜು, ರೈಲ್ವೆ ಹೋರಾಟ ಸಮಿತಿ ಅಧ್ಯಕ್ಷ ಆನಮಾನಹಳ್ಳಿ ನಾಗರಾಜು, ಶಿವಕುಮಾರ್, ಜಯಕರ್ನಾಟಕ ಸಂಘಟನೆಯ ತಾಲ್ಲೂಕು ಅಧ್ಯಕ್ಷ ರಾಮಚಂದ್ರು, ಜಿಲ್ಲಾ ಮುಖಂಡ ಎ.ಪಿ.ಕೃಷ್ಣಪ್ಪ, ಲಿಂಗರಾಜು, ಕೃಷ್ಣಪ್ಪ ಮಂಗಳವಾರಪೇಟೆ, ಮಿಲಿಟರಿ ರಾಮಣ್ಣ, ಪವನ್‌ಮ, ರವಿಕುಮಾರ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT