ರಾಯಚೂರು: ಮಹಿಳೆಯನ್ನು ನಿಕೃಷ್ಟವಾಗಿ ಕಾಣುವ ದೃಷ್ಟಿಕೋನ ಬದಲಾವಣೆಗೆ ಕಾನೂನಿನ ಅಸ್ತ್ರ ಬೇಕಿಲ್ಲ. ಮಾನವೀಯತೆ ರೂಢಿಸಿಕೊಂಡು ನಡೆದರೆ ಸಾಕು. ಮಹಿಳೆಗೆ ಬೇಕಿರುವುದು ಶೋಷಣೆ ಮುಕ್ತ ಬದುಕು ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಎನ್.ಬಿ.ಕುಲಕರ್ಣಿ ಹೇಳಿದರು.ಇಲ್ಲಿನ ವೀರಶೈವ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ ಹಾಗೂ ವೀರಶೈವ ಸಂಘದ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ’ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಪುರುಷರಷ್ಟೇ ಮಹಿಳೆ ಸಮಾನ ಎಂದು ಈ ಸಮಾಜ, ಕಾನೂನು ಒಪ್ಪುತ್ತವೆಯಾದರೂ ಈ ಸಮಾನತೆಯ ಅನುಭವ ಪಡೆಯಲು ಅಗತ್ಯ ಅವಕಾಶವನ್ನು ಸಮಾಜ ಮಾಡಿಕೊಡಬೇಕಿದೆ ಎಂದು ಆಶಯ ವ್ಯಕ್ತಪಡಿಸಿದರು.ವಿಶೇಷ ಉಪನ್ಯಾಸ ನೀಡಿದ ಡಾ. ಶೀಲಾ ದಾಸ್, ‘ತನಗರಿವಿಲ್ಲದೆಯೇ ಮಹಿಳೆ ನಿರ್ಬಂಧಕ್ಕೊಳಗಾಗುತ್ತಾ ಬಂದಿದ್ದಾಳೆ. ಸದ್ಯ ಶೇ.100 ರಷ್ಟು ಮಹಿಳೆ ಏಳ್ಗೆ ಹೊಂದಿದ್ದಾಳೆ ಎಂದು ಭಾವಿಸಿದರೂ ಅದರ ದುಪ್ಪಟ್ಟು ಮಹಿಳೆಯರು ಹಿಂದುಳಿದಿದ್ದಾರೆ. ಮಹಿಳೆಯನ್ನು ಕುಟುಂಬ ಪ್ರೋತ್ಸಾಹಿಸಿದರೆ ಸಾಕು ಆಕೆ ಸರ್ಕಾರ ಸೇರಿದಂತೆ ಯಾರ ನೆರವೂ ಇಲ್ಲದೇ ಏಳ್ಗೆ ಸಾಧಿಸಬಲ್ಲಳು‘ ಎಂದು ನುಡಿದರು.
ವಕೀಲರ ಸಂಘದ ಅಧ್ಯಕ್ಷ ಎನ್ ಭಾನುರಾಜ ವಕೀಲ, ಜಗದೀಶ ಅತಿಥಿಗಳಾಗಿ ಆಗಮಿಸಿದ್ದರು. ಜಿಲ್ಲಾ ನ್ಯಾಯಾಲಯ ಹೆಚ್ಚುವರಿ ನ್ಯಾಯಾಧೀಶ ಜೀವನರಾವ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕಿಯರಾದ ರೇಣುಕಾ, ಕೆ.ಚಂದ್ರಕಲಾ ಹಾಗೂ ವಕೀಲೆ ಶಕುಂತಲಾ ಅವರನ್ನು ಸತ್ಕರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.