ADVERTISEMENT

ಮಾಣಿಕಮ್ಮ ದರ್ಶನ ಸಿಗದೆ ಭಕ್ತರು ನಿರಾಶೆ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2012, 19:30 IST
Last Updated 20 ಫೆಬ್ರುವರಿ 2012, 19:30 IST

ಸೇಡಂ: ತಾಲ್ಲೂಕಿನ ಯಾನಾಗುಂದಿ ಮಾತೆ ಮಾಣಿಕಮ್ಮ ಸೂರ್ಯನಂದಿ ಬೆಟ್ಟದ ಕ್ಷೇತ್ರದಲ್ಲಿ ಮಾತಾ ಮಾಣಿಕೇಶ್ವರಿ ತಾಯಿ ಸೋಮವಾರ ಮಹಾಶಿವರಾತ್ರಿ ಅಂಗವಾಗಿ ಭಕ್ತರಿಗೆ  30 ನಿಮಿಷ   ದರ್ಶನ ನೀಡಿದರು.

ಈ ಹಿಂದಿನ ವರ್ಷಗಳ ಪದ್ಧತಿಯಂತೆ ಮಧ್ಯಾಹ್ನ 12ರ ನಂತರ ಮತ್ತು ಮಧ್ಯಾಹ್ನ 3 ಗಂಟೆ ಒಳಗೆ ದರ್ಶನ ನೀಡುವ ಮಾತಾ ಮಾಣಿಕೇಶ್ವರಿ ಅವರು ಬೆಳಿಗ್ಗೆ 9.15 ಕ್ಕೆಆಗಮಿಸಿದರು. ಬಳಿಕ 9.45ಕ್ಕೆ ದರ್ಶನ ವೇದಿಕೆಯಿಂದ ನಿರ್ಗಮಿಸಿದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಇದರಿಂದ ಸಾವಿರಾರು ವಾಹನಗಳ ಮೂಲಕ ಆಂಧ್ರ, ಕರ್ನಾಟಕ, ಮಹಾರಾಷ್ಟ್ರಗಳಿಂದ ನಿರಂತರವಾಗಿ ಬರುತ್ತಿದ್ದ ಅನೇಕ ಭಕ್ತರು ತಾಯಿ ದರ್ಶನ ಭಾಗ್ಯ ದೊರೆಯದೆ ನಿರಾಶೆಗೊಂಡರು.

ಸಹಜವಾಗಿ ಪ್ರತಿ ವರ್ಷ ಒಂದು ಲಕ್ಷಕ್ಕೂ ಹೆಚ್ಚು ಭಕ್ತರು ದರ್ಶನ ಪಡೆಯುತ್ತಾರೆ. ದರ್ಶನದ ಸಮಯ ನಿಖರವಾಗಿ ಭಕ್ತರಿಗೆ ತಿಳಿಸದ ಕಾರಣ ತಮಗೆ ಮಾತೆಯ ದರ್ಶನ ಭಾಗ್ಯ ಲಭಿಸಲಿಲ್ಲ ಎಂದು ನಿರಾಶೆಗೊಂಡ ಅನೇಕ ಭಕ್ತರು ತಮ್ಮ ಅಳಲು ತೊಡಿಕೊಂಡರು.

ನಿರಂತರವಾಗಿ ಬರುತ್ತಿದ್ದ ಭಕ್ತರಿಗಾಗಿ ಜಿ. ರಮೇಶ ಮತ್ತು ಅವರ ಕುಟುಂಬದ ಸದಸ್ಯರು 60 ಕ್ವಿಂಟಲ್ ಅನ್ನ ದಾಸೋಹ ವ್ಯವಸ್ಥೆ ಮಾಡಿದ್ದರು. ಎಲ್ಲೆಡೆ ಕುಡಿಯುವ ನೀರಿನ ಪೊಟ್ಟಣಗಳನ್ನು ವಿತರಿಸಿದರು.
 
ವಿವಿಧ ಸ್ಥಳಗಳಿಂದ ಬಂದ ಸಹಸ್ರಾರು ವಾಹನಗಳ ನಿಲುಗಡೆಗೆ ಸೂಕ್ತ ವ್ಯವಸ್ಥೆ ಮತ್ತು ಜನರನ್ನು ಅಚ್ಚುಕಟ್ಟಾಗಿ ನಿಯಂತ್ರಿಸುವಲ್ಲಿ ಸರ್ಕಲ್ ಇನ್‌ಸ್ಪೆಕ್ಟರ್ ವೀರಭದ್ರಯ್ಯ ನೇತೃತ್ವದ ಪೊಲೀಸ್ ತಂಡ ಕ್ರಮ ಕೈಗೊಂಡಿತ್ತು. ಇದರಿಂದ ಶಾಂತಿಯುತವಾಗಿ ದರ್ಶನ ಕಾರ್ಯಕ್ರಮ ನೆರವೇರಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.