ADVERTISEMENT

ಮೂಲಸೌಲಭ್ಯ ವಂಚಿತ ಬೇರುಕೊಡಿಗೆ

​ಪ್ರಜಾವಾಣಿ ವಾರ್ತೆ
Published 3 ಮೇ 2012, 19:30 IST
Last Updated 3 ಮೇ 2012, 19:30 IST

ಕೊಪ್ಪ: ತಾಲ್ಲೂಕಿನ ಬಿಂತ್ರವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೇರುಕೊಡಿಗೆ ಹಿರಿಯ ಪ್ರಾಥಮಿಕ ಶಾಲೆ ಹಿಂಭಾಗದಲ್ಲಿರುವ ಬಡಾವಣೆ ಮೂಲ ಸೌಕರ್ಯಗಳ ಕೊರತೆಯಿಂದ ಬಳಲುತ್ತಿದೆ.ಬಡಾವಣೆಯಲ್ಲಿ 20ಕ್ಕೂ ಹೆಚ್ಚು ಮನೆಗಳಿದ್ದು, 14 ಮನೆಗಳಿಗೆ ಗ್ರಾಮ ಪಂಚಾಯಿತಿ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಿದ್ದರೂ, ಮೋಟಾರ್ ಕೆಟ್ಟು ತಿಂಗಳಾದರೂ ದುರಸ್ತಿಯಾಗದೆ ಕುಡಿಯುವ ನೀರು ದೊರಕುತ್ತಿಲ್ಲ.

 ಬಡಾವಣೆಯ ಪಕ್ಕದಲ್ಲಿ ಹಾದು ಹೋಗಿರುವ ರಸ್ತೆಗೆ ಅಡ್ಡಲಾಗಿ 11ಕೆ.ವಿ. ವಿದ್ಯುತ್ ತಂತಿಗಳನ್ನು ಕೆಳಮಟ್ಟದಲ್ಲಿ ಎಳೆಯಲಾಗಿದ್ದು, ರೈತರ ಜಮೀನುಗಳಿಗೆ ಗೊಬ್ಬರ ಸಾಗಿಸಲು ಅಡಚಣೆಯಾಗುತ್ತಿದೆ. ಸ್ಥಳ ಪರಿಶೀಲನೆ ನಡೆಸಿರುವ ಮೆಸ್ಕಾಂ ಎಂಜಿನಿಯರ್‌ಗಳು ಯಾವುದೇ ಕ್ರಮ ವಹಿಸಿಲ್ಲ. ಬೇರುಕೊಡಿಗೆ ದೇವಸ್ಥಾನದ ಬಳಿ ವಿದ್ಯುತ್ ಕಂಬ ಉರುಳಿ  ತಂತಿಗಳು ರಸ್ತೆ ಬದಿಯಲ್ಲಿ ಬಿದ್ದಿದ್ದು, ಸುತ್ತಮುತ್ತಲ ಗ್ರಾಮಗಳಿಗೆ ಹಲವು ದಿನಗಳಿಂದ ವಿದ್ಯುತ್ ಕಡಿತಗೊಂಡಿದೆ.

 ಬಡಾವಣೆಯ ಹಲವು ಮನೆಗಳಿಗೆ ಹಕ್ಕುಪತ್ರ ನೀಡಿಲ್ಲ. ಗ್ರಾಮದ ಕೂಲಿಕಾರ ಪರಿಶಿಷ್ಟ ಜಾತಿಯ ರಾಘವೇಂದ್ರ ಸೋಗೆ ಗುಡಿಸಲಿನಲ್ಲಿ 3 ವರ್ಷಗಳಿಂದ ವಾಸಿಸುತ್ತಿದ್ದರೂ,  ಕುಟುಂಬಕ್ಕೆ ಆಶ್ರಯ ಒದಗಿಸಲು ಗ್ರಾ.ಪಂ.ಮುಂದಾಗಿಲ್ಲ. ಇವರು ನೀಡಿದ ಅರ್ಜಿಗಳಿಗೆ ಬೆಲೆ ಇಲ್ಲವಾಗಿದೆ. ಮಳೆಗಾಲದಲ್ಲಿ ಬಡ ಕುಟುಂಬ ದಿನಕಳೆಯುವುದೇ ಕಷ್ಟವಾಗಿದೆ.

 ಬಡಾವಣೆಯಲ್ಲಿ 1.5 ಕಿ.ಮೀ. ಡಾಂಬರು ರಸ್ತೆ ಮಾಡಿ ಮಿಕ್ಕ ರಸ್ತೆಗೆ ಜಲ್ಲಿ ಹಾಕಿ ಬಿಡಲಾಗಿದ್ದು ಓಡಾಟಕ್ಕೆ ಅಡ್ಡಿಯಾಗುತ್ತಿದೆ. ಬಡಾವಣೆಯ ಜನ ಪಡಿತರಕ್ಕೆ 5 ಕಿ.ಮೀ.ದೂರದ ಬಾಳಗಡಿಗೆ ಅಲೆಯಬೇಕಾಗಿದೆ. ಬಡಾವಣೆಯ ಕುಡಿಯುವ ನೀರು, ರಸ್ತೆ ಡಾಂಬರೀಕರಣಕ್ಕೆ ಒತ್ತಾಯಿಸಿರುವ ಇಲ್ಲಿಯ ನಿವಾಸಿಗಳು ಗುಡಿಸಲು ವಾಸಿ ರಾಘವೇಂದ್ರಗೆ ಆಶ್ರಯ ಮನೆ ದೊರಕಲಿ ಎಂದು ಮೊರೆ ಇಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.