ADVERTISEMENT

ಮೃಗಾಲಯ ಸಿಂಹಕ್ಕೆ ಸಂತಾನ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2012, 19:30 IST
Last Updated 2 ಆಗಸ್ಟ್ 2012, 19:30 IST
ಮೃಗಾಲಯ ಸಿಂಹಕ್ಕೆ ಸಂತಾನ ಸಂಭ್ರಮ
ಮೃಗಾಲಯ ಸಿಂಹಕ್ಕೆ ಸಂತಾನ ಸಂಭ್ರಮ   

ಮೈಸೂರು: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಅನಿಲ್ ಕುಂಬ್ಳೆ ಅವರ ಅಚ್ಚುಮೆಚ್ಚಿನ ಏಷ್ಯಾದ ಸಿಂಹದ ಜೋಡಿ ಗೌರಿ ಮತ್ತು ಶಂಕರ ಶ್ರೀಚಾಮರಾಜೇಂದ್ರ ಮೃಗಾಲಯದಲ್ಲಿ ಮರಿಸಿಂಹಕ್ಕೆ ಜನ್ಮ ನೀಡಿವೆ.
 ಎರಡು ತಿಂಗಳಲ್ಲಿ ಕೆಲವು ಪ್ರಾಣಿಗಳ ಸಾವಿನಿಂದಲೇ ಸುದ್ದಿಯಲ್ಲಿರುವ  ಮೃಗಾಲಯದಲ್ಲಿ ಸ್ವಲ್ಪಮಟ್ಟಿಗೆ ಇದು ಸಮಾಧಾನ ತಂದಿದೆ. ಮೃಗಾಲಯದ ಮೂಲಗಳ ಪ್ರಕಾರ ಜುಲೈ 29ರಂದು ಜನಿಸಿರುವ ಮರಿ ಮತ್ತು ತಾಯಿ ಆರೋಗ್ಯವಾಗಿವೆ.

ಈ ಸಿಂಹದ ಜೋಡಿಯನ್ನು 2011ರಲ್ಲಿ ಜುನಾಗಢದ ಶಕ್ಕರ್‌ಬಾಗ್ ಮೃಗಾಲಯದಿಂದ  ತರಲಾಗಿತ್ತು . ಪ್ರಾಣಿ ವಿನಿಮಯ ಯೋಜನೆಯಡಿಯಲ್ಲಿ ಮೈಸೂರು ಮೃಗಾಲಯವು ಈ ಜೋಡಿ ಪಡೆದಿತ್ತು. ಕರ್ನಾಟಕ ವನ್ಯಜೀವಿ ಮಂಡಳಿಯ ಉಪಾಧ್ಯಕ್ಷರೂ ಆಗಿರುವ ಅನಿಲ್ ಕುಂಬ್ಳೆ ಅವರ ಪ್ರಯತ್ನ ಹಾಗೂ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಆಸಕ್ತಿಯ ಫಲವಾಗಿ ಈ ವಿನಿಮಯ ನಡೆದಿತ್ತು.
 

ಕಪುಚಿನ್ ಕೋತಿ, ಚೀತಾ ಸಾವು

ಸಿಂಹದ ಮರಿ ಜನಿಸಿದ ಸಂಭ್ರಮ ಆಚರಿಸಿದ ಬೆನ್ನಲ್ಲೇ ಕಪುಚಿನ್ ಕೋತಿ ಮತ್ತು ಅದರ ಮರಿಯ ಸಾವು ಸಂಭವಿಸಿದೆ. ಕೆಲವು ದಿನಗಳ ಹಿಂದೆ ಕಪುಚಿನ್ ಕೋತಿಯು ಮರಿಗೆ ಜನ್ಮ ನೀಡಿತ್ತು.

ನಾಲ್ಕು ದಿವಸದ ಹಿಂದೆ ಮರದ ಮೇಲಿಂದ ಬಿದ್ದ ತಾಯಿ ಕೋತಿ ಮರಣ ಹೊಂದಿತ್ತು. ನಂತರ ಮರಿಗೆ ತಾಯಿಯ ಹಾಲು ಸಿಗದ ಕಾರಣ ನಿಶ್ಯಕ್ತಗೊಂಡು ಸಾವನ್ನಪ್ಪಿದೆ. ಐದು ತಿಂಗಳ ಹಿಂದೆ ಜೆಕ್ ಗಣರಾಜ್ಯದಿಂದ ಕಪುಚಿನ್ ಮಂಗಗಳನ್ನು ತರಿಸಲಾಗಿತ್ತು.

ಮತ್ತೊಂದು ಚೀತಾ ಮರಿ ಸಾವು: ಶ್ರೀಚಾಮರಾಜೇಂದ್ರ ಮೃಗಾಲಯದಲ್ಲಿ ಮತ್ತೊಂದು ಬೇಟೆ ಚೀತಾಮರಿ ಮೃತಪಟ್ಟಿದೆ. ಜೂನ್ ತಿಂಗಳಾಂತ್ಯದಲ್ಲಿ ತೀವ್ರ ಅನಾರೋಗ್ಯದಿಂದ ಮೃತಪಟ್ಟ ಹೆಣ್ಣು ಚೀತಾ ಮಾಯಾಳ ಐದು ಮರಿಗಳಲ್ಲಿ ಇದು ಒಂದಾಗಿತ್ತು.

ಕಳೆದ ತಿಂಗಳು ಬೇಟೆ ಚೀತಾದ ಎರಡು ಮರಿಗಳು ಸತ್ತಿದ್ದವು. ತಾಯಿಯ ಅಗಲಿಕೆಯಿಂದ ತೀವ್ರವಾಗಿ ಬಳಲುತ್ತಿದ್ದ ಚೀತಾಮರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೂ ತೀವ್ರ ಅಸ್ವಸ್ಥತೆಯಿಂದಾಗಿ ಮೃತಪಟ್ಟಿದೆ. ಮರಣೋತ್ತರ ಪರೀಕ್ಷೆಯ ನಂತರವಷ್ಟೇ ಸಾವಿಗೆ ಕಾರಣ ಗೊತ್ತಾಗಲಿದೆ ಎಂದು ಮೃಗಾಲಯದ ಮೂಲಗಳು ತಿಳಿಸಿವೆ.


ಸಿಂಹದ ಜೋಡಿಯ ಬದಲಿಗೆ ಮೈಸೂರು ಮೃಗಾಲಯದಿಂದ ಭಾರತೀಯ ಕಾಡುಕೋಣ ಮತ್ತು ಪಕ್ಷಿಗಳನ್ನು ಜುನಾಗಢದ ಮೃಗಾಲಯಕ್ಕೆ ನೀಡುವ ಒಪ್ಪಂದವಾಗಿತ್ತು.

ಏಷ್ಯಾದ ಸಿಂಹಗಳೂ ಕೂಡ ಅಳಿವಿನಂಚಿನಲ್ಲಿರುವ ಪ್ರಾಣಿಗಳು. ಗುಜರಾತ್‌ನ ಗೀರ್ ಅರಣ್ಯ ಪ್ರದೇಶದಲ್ಲಿ ಮಾತ್ರ ಈ ಸಿಂಹಗಳ ಸಂತಾನೋತ್ಪತ್ತಿ ನಡೆಯುತ್ತದೆ. ಆದರೆ, ಮೈಸೂರಿನ ವಾತಾವರಣವು ಈ ಸಿಂಹ ಜೋಡಿಯ ಸಂತಾನೋತ್ಪತ್ತಿಗೆ ಸಹಕಾರಿಯಾಗಿರುವುದು ಒಳ್ಳೆಯ ಬೆಳವಣಿಗೆ ಎಂದು ಮೃಗಾಲಯದ ಮೂಲಗಳು ತಿಳಿಸಿವೆ.

ಜರ್ಮನಿಯಿಂದ ತರಲಾಗಿದ್ದ ಆಫ್ರಿಕನ್ ಬೇಟೆ ಚೀತಾಗಳು, ಸೀಳುನಾಯಿಗಳು, ಜಿರಾಫೆ ಕೂಡ ಈ ಮೃಗಾಲಯದಲ್ಲಿ ಈಚೆಗೆ ಸಂತಾನೋತ್ಪತ್ತಿ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು. 

ಗೌರಿ ಮತ್ತು ಅದರ ಮರಿಯ ಬಗ್ಗೆ ವಿಶೇಷ ನಿಗಾ ವಹಿಸಲಾಗಿದೆ. ಇನ್ನೂ ಸಾರ್ವಜನಿಕರ ದರ್ಶನಕ್ಕೆ ಮುಕ್ತಗೊಳಿಸಲಾಗಿಲ್ಲ. ಕಳೆದ ಎರಡು ತಿಂಗಳಲ್ಲಿ ಮೃಗಾಲಯದಲ್ಲಿ ಆಫ್ರಿಕನ್ ಚೀತಾ ಮತ್ತು ಮರಿಗಳು, ಹೆಣ್ಣು ಹುಲಿಯ ಸಾವು ಸಂಭವಿಸಿರುವುದರಿಂದ, ಸಿಂಹಿಣಿ ಹಾಗೂ ಮರಿಯನ್ನು ಯಾವುದೇ ಸೋಂಕು ತಗುಲದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ.

ಸುಮಾರು 20 ವರ್ಷ ಬದುಕಿದ್ದ ಬಿಳಿ ಹುಲಿ ರೀಟಾ, ಅನಾರೋಗ್ಯದ ಕಾರಣದಿಂದ ಹೆಣ್ಣು ಬೇಟೆ ಚೀತಾ ಮಾಯಾ ಮತ್ತು ಮೂರು ಚೀತಾ ಮರಿಗಳು ಸಾವನ್ನಪ್ಪಿದ್ದವು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.