ADVERTISEMENT

ಮೈಸೂರು-ತಲಚೇರಿ ರೈಲು ಸರ್ವೆ ಪೂರ್ಣ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2011, 19:30 IST
Last Updated 2 ಅಕ್ಟೋಬರ್ 2011, 19:30 IST

ಮೈಸೂರು: `ಮೈಸೂರು-ತಲಚೇರಿ ಹೊಸ ರೈಲು ಮಾರ್ಗದ ಸರ್ವೆ ಕಾರ್ಯ ಪೂರ್ಣಗೊಂಡಿದೆ~ ಎಂದು ಕೇಂದ್ರ ರೈಲ್ವೆ ರಾಜ್ಯ ಖಾತೆ ಸಚಿವ ಕೆ.ಎಚ್.ಮುನಿಯಪ್ಪ ಇಲ್ಲಿ ತಿಳಿಸಿದರು.

  ನಗರ ರೈಲು ನಿಲ್ದಾಣದಲ್ಲಿ ಮೈಸೂರು-ಬೆಂಗಳೂರು ಚಾಮುಂಡಿ ಎಕ್ಸ್‌ಪ್ರೆಸ್ ರೈಲಿನಲ್ಲಿ  ಮೈಸೂರು ಸ್ಯಾಂಡಲ್ ಸಾಬೂನಿನ ಪ್ರಚಾರಕ್ಕೆ ಭಾನುವಾರ ಬೆಳಿಗ್ಗೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

`ಮೈಸೂರು-ತಲಚೇರಿ-ವೈನಾಡು ಮಾರ್ಗವಾಗಿ 236 ಕಿ.ಮೀ., ಮತ್ತೊಂದೆಡೆ ಮೈಸೂರು- ತಲಚೇರಿ- ನಂಜನಗೂಡು ಮಾರ್ಗವಾಗಿ 241 ಕಿ.ಮೀ. ಉದ್ದದ ಮಾರ್ಗ ಸರ್ವೆಯಿಂದ ಗೊತ್ತಾಗಿದೆ. ಇದು ರೂ 2100 ಕೋಟಿ ವೆಚ್ಚದ ಯೋಜನೆಯಾಗಿದ್ದು ರೈಲ್ವೆ ಮಂಡಳಿಯೊಂದಿಗೆ ಸಭೆಯನ್ನು ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಕೇರಳ ಮುಖ್ಯಮಂತ್ರಿಯೊಂದಿಗೆ ಈ ಕುರಿತು ಚರ್ಚಿಸಿದ್ದೇನೆ~ ಎಂದು ತಿಳಿಸಿದರು.

`ಬೆಂಗಳೂರು- ಸತ್ಯಮಂಗಲ ರೈಲು ಮಾರ್ಗಕ್ಕೆ ನಿಸರ್ಗ ಅಡಚಣೆಯಾಗಿದೆ. ಬೆಂಗಳೂರು- ಕನಕಪುರ- ಮಳವಳ್ಳಿ ಮಾರ್ಗವಾಗಿ ಚಾಮರಾಜನಗರದವರೆಗೆ ಯಾವುದೇ ಸಮಸ್ಯೆ ಇಲ್ಲ. ನಿಸರ್ಗ ಅಡ್ಡಿಯಾಗಿರುವ ಕುರಿತು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಲಾಗುವುದು.

ಮೈಸೂರು- ಕುಶಾಲನಗರ ಮಾರ್ಗದ ಸರ್ವೆಕಾರ್ಯವನ್ನು ತಿಂಗಳೊಳಗೆ ಆರಂಭಿಸಲಾಗುವುದು~ ಎಂದು ಹೇಳಿದರು.

`ಬೆಂಗಳೂರು-ಮೈಸೂರು ಜೋಡಿ ರೈಲು ಮಾರ್ಗ ಕಾರ್ಯ ಭೂ ವಿವಾದದಿಂದ ಸ್ವಲ್ಪ ಹಿನ್ನಡೆಯಾಗಿದೆ. 45 ಎಕರೆ ಭೂಮಿ ರಾಜ್ಯ ಸರ್ಕಾರ ನೀಡಬೇಕಿದೆ. ಅಲ್ಲದೆ ಶ್ರೀರಂಗಪಟ್ಟಣದಲ್ಲಿ ಪುರಾತನ ಕಟ್ಟಡ ಅಡ್ಡ ಬಂದಿದೆ. ಇದನ್ನು ಇನ್ಸ್‌ಟಿಟ್ಯೂಟ್ ಆಫ್ ಎಂಜಿನಿಯರ್ಸ್‌ ಸಂಸ್ಥೆ ಸ್ಥಳಾಂತರಿಸುವ ಹೊಣೆ ಹೊತ್ತಿದೆ. ಪಾಲಹಳ್ಳಿಯಲ್ಲಿ ರೈಲು ನಿಲ್ದಾಣದ ಬೇಕೆಂಬ ಬೇಡಿಕೆ ಇದೆ. ಇವೆಲ್ಲ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲಾಗುವುದು~ ಎಂದು ಹೇಳಿದರು.

 ಬೆಂಗಳೂರಿಗೆ ವಿಶೇಷ ರೈಲು: `ಮೈಸೂರಿನಿಂದ ಬೆಂಗಳೂರಿಗೆ ಮತ್ತೊಂದು ವಿಶೇಷ ರೈಲು ಸಂಚರಿಸಲಿದೆ. ಒಂದು ತಿಂಗಳೊಳಗೆ ಇದು ಆರಂಭವಾಗಲಿದ್ದು, ಸಮಯ ಇನ್ನೂ ನಿಗದಿಯಾಗಿಲ್ಲ~ ಎಂದರು.

 `ವಿವಿಧೆಡೆ ರೈಲ್ವೆ ಆಸ್ಪತ್ರೆಗಳನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವ (ಪಿಪಿಪಿ)ದಲ್ಲಿ ತೆರೆಯಲು ಚಿಂತನೆ ನಡೆದಿದೆ. ಆದರೆ ಖಾಸಗಿಯವರು ಎಷ್ಟು ಹಣ ವಿನಿಯೋಗಿಸಬೇಕು, ಲಾಭದ ಕುರಿತು ಇನ್ನೂ ಚರ್ಚೆ ನಡೆದಿಲ್ಲ. ರೈಲ್ವೆ ಮಂಡಳಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು~ ಎಂದು ಪ್ರಶ್ನೆಗೆ ಉತ್ತರಿಸಿದರು. 

 `ರೈಲ್ವೆ ನಿಲ್ದಾಣಗಳಲ್ಲಿ ಕಡ್ಡಾಯವಾಗಿ ತ್ರಿಭಾಷಾ ಸೂತ್ರವನ್ನು ಅನುಸರಿಸಲಾಗುವುದು. ಹಿಂದಿ, ಇಂಗ್ಲಿಷ್ ಜೊತೆಗೆ ಸ್ಥಳೀಯ ಭಾಷೆಗೆ ಆದ್ಯತೆ ನೀಡಲಾಗುವುದು. ಇದು ಎಲ್ಲ ರಾಜ್ಯಕ್ಕೆ ಅನ್ವಯಿಸಲಿದೆ~ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.