ADVERTISEMENT

ಮ್ಯಾಕ್ಸಿಕ್ಯಾಬ್ ಪಲ್ಟಿ: ಇಬ್ಬರ ಸಾವು

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2012, 19:30 IST
Last Updated 2 ಫೆಬ್ರುವರಿ 2012, 19:30 IST

ಬೀದರ್: ಮ್ಯಾಕ್ಸಿಕ್ಯಾಬ್ ಪಲ್ಟಿ ಹೊಡೆದು ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಬೀದರ್ ತಾಲ್ಲೂಕಿನ ಮರಕಲ್ ಸಮೀಪದ ನೀರು ಶುದ್ಧೀಕರಣ ಘಟಕದ ಬಳಿ ಗುರುವಾರ ನಡೆದಿದೆ.

ಬೀದರ್ ತಾಲ್ಲೂಕಿನ ಅಲಿಯಂಬರ್ ಗ್ರಾಮದ ಶರಣಪ್ಪ ಉಪ್ಪಿನ್ (38) ಮತ್ತು ಭಾಲ್ಕಿ ತಾಲ್ಲೂಕಿನ ಬಾಳೂರು ಗ್ರಾಮದ ದತ್ತು (40) ಮೃತಪಟ್ಟವರು.

ಪ್ರಯಾಣಿಕರನ್ನುತುಂಬಿಕೊಂಡು ಬೀದರ್‌ನಿಂದ ನಿಟ್ಟೂರು ಕಡೆಗೆ ಹೊರಟಿದ್ದ ಮ್ಯಾಕ್ಸಿಕ್ಯಾಬ್ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ತಲೆ ಕೆಳಗಾಗಿ ಪಲ್ಟಿ ಹೊಡೆದಿದೆ. ಘಟನೆಯಲ್ಲಿ 8 ಜನರಿಗೆ ತೀವ್ರ ಗಾಯಗಳಾಗಿವೆ. ಮ್ಯಾಕ್ಸಿಕ್ಯಾಬ್‌ನಲ್ಲಿ 35 ರಿಂದ 40 ಜನ ಪ್ರಯಾಣಿಸುತ್ತಿದ್ದರು. ಬಹುತೇಕ ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಘಟನೆ ಸಂಭವಿಸುತ್ತಲೇ ಮ್ಯಾಕ್ಸಿಕ್ಯಾಬ್ ಒಳಗಿದ್ದವರ ಕೂಗಾಟ, ಚೀರಾಟ ಮುಗಿಲು ಮುಟ್ಟಿತ್ತು. ಮ್ಯಾಕ್ಸಿಕ್ಯಾಬ್‌ನಿಂದ ಹೊರಬರಲು ಹರಸಾಹಸ ಪಡಬೇಕಾಯಿತು. ಮೃತಪಟ್ಟವರ ರಕ್ತಸಿಕ್ತ ಶವಗಳು ಮ್ಯಾಕ್ಸಿಕ್ಯಾಬ್‌ನ ಎರಡು ಬದಿಯಲ್ಲಿ ಬಿದ್ದಿದ್ದವು. ಕೂಡಲೇ ಸ್ಥಳಕ್ಕೆ ಧಾವಿಸಿದ ಸುತ್ತಮುತ್ತಲಿನ ಜನ ನೆರವಿಗೆ ಮುಂದಾದರು. ಸಾರ್ವಜನಿಕರು ಹಾಗೂ ಪೊಲೀಸರ ಸಹಾಯದಿಂದ ಮ್ಯಾಕ್ಸಿಕ್ಯಾಬ್ ಒಳಗೆ ಸಿಕ್ಕಿ ಹಾಕಿಕೊಂಡವರನ್ನು ಸುರಕ್ಷಿತವಾಗಿ ಹೊರಕ್ಕೆ ತರಲಾಯಿತು.

ಮ್ಯಾಕ್ಸಿಕ್ಯಾಬ್ ಪಲ್ಟಿ ಆಗಿರುವ ಬಗ್ಗೆ ಮಾಹಿತಿ ನೀಡಿದರೂ 108 ಸಿಬ್ಬಂದಿ ಬರಲು ತಡ ಮಾಡಿದರು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.

108 ಗೆ ಕರೆ ಮಾಡಿದ ಸುಮಾರು 45 ನಿಮಿಷಗಳ ನಂತರ ಅಂಬ್ಯುಲೆನ್ಸ್ ತರಲಾಗಿದೆ ಎಂಬ ಆರೋಪ ಜನರದ್ದಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.