ADVERTISEMENT

ಯಲಬುರ್ಗಾ ತಾ.ಪಂ. ಅಧ್ಯಕ್ಷರ ಆಯ್ಕೆ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2011, 19:40 IST
Last Updated 21 ಫೆಬ್ರುವರಿ 2011, 19:40 IST

ಯಲಬುರ್ಗಾ: ತಾಲ್ಲೂಕು ಪಂಚಾಯತಿ ಅಧ್ಯಕ್ಷರಾಗಿ ನೀಲಮ್ಮ ಕೊಟ್ರಪ್ಪ ಜವಳಿ ಹಾಗೂ ಉಪಾಧ್ಯಕ್ಷರಾಗಿ ಹೊಳೆಗೌಡ ಮುದೇಗೌಡ ಸೋಮವಾರ ಅವಿರೋಧವಾಗಿ ಆಯ್ಕೆಯಾದರು.

ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸಹಾಯಕ ಆಯುಕ್ತ ಎಂ. ಶರಣಬಸಪ್ಪ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು. ಅಧ್ಯಕ್ಷಸ್ಥಾನಕ್ಕೆ ಮೀಸಲಿದ್ದ ಹಿಂದುಳಿದ ವರ್ಗ ‘ಬ’ ಮಹಿಳೆ ಸ್ಥಾನಕ್ಕೆ  ಬೆಣಕಲ್ಲ ಕ್ಷೇತ್ರದ ಬಿಜೆಪಿ ಸದಸ್ಯೆ ನೀಲಮ್ಮ ಜವಳಿ, ಉಪಾಧ್ಯಕ್ಷ ಸ್ಥಾನಕ್ಕೆ ಮುರಡಿ ಕ್ಷೇತ್ರದ ಹೊಳೆಗೌಡ ಅವರ ಆಯ್ಕೆಯನ್ನು ಘೋಷಿಸಲಾಯಿತು.
ಒಟ್ಟು 23 ಸದಸ್ಯ ಬಲದ ತಾಲ್ಲೂಕು ಪಂಚಾಯಿತಿಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ತಲಾ 10 ಸ್ಥಾನಗಳಿಂದ ಸಮಬಲ ಹೊಂದಿದ್ದವು. ಇಬ್ಬರು ಪಕ್ಷೇತರರು ಮತ್ತು ಒಬ್ಬ ಜೆಡಿಎಸ್ ಸದಸ್ಯರ ಬೆಂಬಲ ಪಡೆಯುವ ಮೂಲಕ ಬಿಜೆಪಿ, ತಾಲ್ಲೂಕು ಪಂಚಾಯಿತಿ ಇತಿಹಾಸದಲ್ಲಿ ಪ್ರಥಮ ಬಾರಿಗೆ ಆಡಳಿತ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಯಿತು.

ಪ್ರಭಾರ ಕಾರ್ಯನಿರ್ವಾಹಕ ಅಧಿಕಾರಿ ಮನೋಜಕುಮಾರ, ತಹಸೀಲ್ದಾರ್ ಈ.ಡಿ. ಭೃಂಗಿ, ಸಿಪಿಐ ನೂತನ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷರನ್ನು ಅಭಿನಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.