ADVERTISEMENT

ಯಾದಗಿರಿ: ಶಿಕ್ಷಕ, ಉಪನ್ಯಾಸಕರ ಕೊರತೆ

ಚಿದಂಬರ ಪ್ರಸಾದ್
Published 15 ಜೂನ್ 2012, 19:30 IST
Last Updated 15 ಜೂನ್ 2012, 19:30 IST

ಯಾದಗಿರಿ: ಜಿಲ್ಲೆಯಾಗಿ ಎರಡೂವರೆ ವರ್ಷಗಳು ಗತಿಸಿದರೂ, ಶಿಕ್ಷಣ ಇಲಾಖೆಯಲ್ಲಿ ಕೊರತೆ ಎಂಬ ಶಬ್ದ ಇನ್ನೂ ಹೋಗಿಲ್ಲ. ಶಾಲೆಗಳು ಶಿಕ್ಷಕರಿಲ್ಲದೇ ಬಿಕೋ ಎನ್ನುತ್ತಿದ್ದರೆ, ಪದವಿಪೂರ್ವ ಕಾಲೇಜುಗಳಲ್ಲಿ ಉಪನ್ಯಾಸಕರ ಕೊರತೆ ಇದೆ.

ರಾಜ್ಯದ 30ನೇ ಜಿಲ್ಲೆಯಾಗಿರುವ ಯಾದಗಿರಿ, ಪ್ರತಿವರ್ಷ ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಕೊನೆಯ ಸ್ಥಾನ ಪಡೆಯುತ್ತಿದೆ.  ಮೂರು ವರ್ಷಗಳಲ್ಲಿ ಜಿಲ್ಲೆಯ ಸ್ಥಿತಿ ಸುಧಾರಣೆ ಆಗಿಲ್ಲ. ಜಿಲ್ಲೆಯಲ್ಲಿರುವ ಪಾಲಕರು ಮಕ್ಕಳನ್ನು ಬೇರೆ ಜಿಲ್ಲೆಗಳಿಗೆ ಕಳುಹಿಸುವ ಚಿಂತನೆ ಮಾಡುವಂತಾಗಿದೆ.

ಜಿಲ್ಲೆಯ ಪ್ರಾಥಮಿಕ ಶಾಲೆಗಳಲ್ಲಿ ಒಟ್ಟು 4,543 ಶಿಕ್ಷಕರ ಹುದ್ದೆಗಳು ಮಂಜೂರಾಗಿದ್ದು, 14 ಮುಖ್ಯೋಪಾಧ್ಯಾಯರ ಹುದ್ದೆಗಳೂ ಸೇರಿದಂತೆ 534 ಶಿಕ್ಷಕರ ಹುದ್ದೆಗಳು ಖಾಲಿ ಉಳಿದಿವೆ. ಇದರಲ್ಲಿ ಕನ್ನಡ ವಿಷಯದ 331, ಇಂಗ್ಲಿಷ್- 59, ವಿಜ್ಞಾನ ವಿಷಯದ 42, ಹಿಂದಿ ವಿಷಯದ 32, ದೈಹಿಕ ಶಿಕ್ಷಣದ 34 ಶಿಕ್ಷಕರ ಹುದ್ದೆಗಳು ಸೇರಿವೆ.

ಪ್ರೌಢಶಾಲೆಗಳ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಜಿಲ್ಲೆಯಲ್ಲಿ ಒಟ್ಟು 1,211 ಹುದ್ದೆಗಳು ಮಂಜೂರಾಗಿದ್ದು, 217 ಶಿಕ್ಷಕರ ಕೊರತೆಯಿದೆ. ಸಮಾಜ ವಿಜ್ಞಾನದ 14, ಗಣಿತ- 45, ವಿಜ್ಞಾನ- 22, ಕನ್ನಡ- 12, ಹಿಂದಿ- 8, ಇಂಗ್ಲಿಷ್‌ನ 11 ಶಿಕ್ಷಕರ ಹುದ್ದೆಗಳು ಖಾಲಿಯಾಗಿಯೇ ಉಳಿದಿವೆ. ಅಚ್ಚರಿಯ ಸಂಗತಿ ಎಂದರೆ, 74 ಪ್ರೌಢಶಾಲೆಗಳಲ್ಲಿ ಇಂಗ್ಲಿಷ್ ಶಿಕ್ಷಕರ ಹುದ್ದೆಗಳೇ ಮಂಜೂರಾಗಿಲ್ಲ!

ಪಿಯು ಕಾಲೇಜು: ಜಿಲ್ಲೆಯಲ್ಲಿ ಒಟ್ಟು 23 ಸರ್ಕಾರಿ ಪದವಿಪೂರ್ವ ಕಾಲೇಜುಗಳಿದ್ದು, 59 ಉಪನ್ಯಾಸಕರ ಹುದ್ದೆಗಳ ಭರ್ತಿಯಾಗಿಲ್ಲ. ಗ್ರಾಮೀಣ ಪ್ರದೇಶಗಳ  ಪದವಿಪೂರ್ವ ಕಾಲೇಜುಗಳಿಗೆ ಹೋಗಲು ಉಪನ್ಯಾಸಕರು ಹಿಂದೇಟು ಹಾಕುತ್ತಿದ್ದು, ವಿದ್ಯಾರ್ಥಿಗಳಿಗೆ ಸಮರ್ಪಕ ಶಿಕ್ಷಣ ಸಿಗುತ್ತಿಲ್ಲ. ಕನ್ನಡ ವಿಷಯದ 7, ಇಂಗ್ಲಿಷ್- 7, ಹಿಂದಿ 3, ಉರ್ದು 2, ಇತಿಹಾಸ 5, ಅರ್ಥಶಾಸ್ತ್ರ 5, ವಾಣಿಜ್ಯಶಾಸ್ತ್ರ 3, ಸಮಾಜಶಾಸ್ತ್ರ 3, ರಾಜ್ಯಶಾಸ್ತ್ರ 3, ಭೌತಶಾಸ್ತ್ರ 6, ರಸಾಯನಶಾಸ್ತ್ರ 6, ಗಣಿತ 4, ಜೀವಶಾಸ್ತ್ರ ವಿಷಯದ 5 ಉಪನ್ಯಾಸಕರ ಹುದ್ದೆಗಳು ಖಾಲಿಯಾಗಿಯೇ ಉಳಿದಿವೆ. ಆರು  ಪದವಿ ಪೂರ್ವ ಕಾಲೇಜುಗಳು ಪ್ರಾಚಾರ್ಯರಿಲ್ಲದೇ ನಡೆಯುತ್ತಿವೆ.

ಕಾಳಜಿ ಇಲ್ಲದ ಸರ್ಕಾರ: ಜಿಲ್ಲೆಯಾಗಿ ಮೂರನೇ ವರ್ಷದಲ್ಲಿ ಪಾದಾರ್ಪಣೆ ಮಾಡುತ್ತಿದ್ದರೂ, ಶೈಕ್ಷಣಿಕ ಅಭಿವೃದ್ಧಿಯತ್ತ ಸರ್ಕಾರ ಚಿಂತಿಸುತ್ತಿಲ್ಲ. ಫಲಿತಾಂಶ ಕುಸಿದಾಗ ಮಾತ್ರ ಬೆಂಗಳೂರಿನಲ್ಲಿ ಕುಳಿತು ಪತ್ರಿಕಾಗೋಷ್ಠಿ ನಡೆಸುವ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರು, ಇದುವರೆಗೂ ಜಿಲ್ಲೆಗೆ ಬಂದು ಶಿಕ್ಷಣ ಇಲಾಖೆಯ ಅಧಿಕಾರಿಗಳ ಸಭೆಯನ್ನು ಒಮ್ಮೆಯೂ ನಡೆಸಿಲ್ಲ.

ಇದು ಬಿಜೆಪಿ ಸರ್ಕಾರ ಹೊಸ ಜಿಲ್ಲೆಯ ಬಗ್ಗೆ ಇಟ್ಟಿರುವ ಕಾಳಜಿಗೆ ಸ್ಪಷ್ಟ ನಿದರ್ಶನ ಎನ್ನುತ್ತಾರೆ ಹಿರಿಯರಾದ ಶಂಕ್ರಣ್ಣ ವಣಿಕ್ಯಾಳ.  ಶಿಕ್ಷಣ ಸಂಸ್ಥೆಗಳಲ್ಲಿ ಕಲಿಸುವವರೇ ಇಲ್ಲದಿದ್ದರೆ ಶಿಕ್ಷಣದ ಗುಣಮಟ್ಟ ಸುಧಾರಣೆ ಕಾಣುವುದಾದರೂ ಹೇಗೆ? ದ್ವಿತೀಯ ಪಿಯುಸಿ ವಿಜ್ಞಾನ ವಿಷಯದಲ್ಲಿ ಜಿಲ್ಲೆಯಲ್ಲಿ ಕೇವಲ 288 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಜಿಲ್ಲೆಯಲ್ಲಿರುವ 26 ಪದವಿ ಕಾಲೇಜುಗಳಿಗೆ ವಿದ್ಯಾರ್ಥಿಗಳೇ ಇಲ್ಲದಂತಾಗಿದೆ. ಈ ಬಗ್ಗೆ ಜಿಲ್ಲೆಯ ಜನರು ಹಲವಾರು ಬಾರಿ ಮನವಿ ಮಾಡಿದರೂ, ಅದನ್ನು ಕಿವಿಗೆ ಹಾಕಿಕೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ.

ಮೂರು ವರ್ಷಗಳಿಂದ ಶಿಕ್ಷಕರ ನೇಮಕಾತಿ ಆಗಿಲ್ಲ. ಈ ಬಾರಿ ನೇಮಕಾತಿಗಾಗಿ ಸಿಇಟಿ ಪರೀಕ್ಷೆ ನಡೆಸಲಾಗುತ್ತಿದೆ. ಅದರಲ್ಲಿ ಜಿಲ್ಲೆಗೆ 113 ಹುದ್ದೆಗಳನ್ನು ಮೀಸಲಿಡಲಾಗಿದ್ದು, ಅವು ಮಾದರಿ ಶಾಲೆಗಳು ಹಾಗೂ ಹೊಸದಾಗಿ ಆರಂಭವಾಗುತ್ತಿರುವ ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ನೇಮಕಾತಿ ಆಗುವ ಲಕ್ಷಣಗಳಿವೆ. ಇದರಿಂದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿರುವ ಶಿಕ್ಷಕರ ಕೊರತೆ ಮುಂದುವರಿಯಲಿದೆ ಎಂದು ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಹನುಮೇಗೌಡ ಮರಕಲ್ ಆತಂಕ ವ್ಯಕ್ತಪಡಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.